ಜಿಲ್ಲೆ

ಸೌಹಾರ್ದ ವಾತಾವರಣ ಕಾಪಾಡಿ

ಚಿಕ್ಕಬಳ್ಳಾಪುರ: ಭಾರತವು ಸರ್ವಧರ್ಮಗಳ ಐಕ್ಯತೆ ಕಾಪಾಡಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಹೇಳಿದರು. ನಗರದ ಶಾದಿಮಹಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇಫ್ತಿಯಾರ್ ಕೂಟದಲ್ಲಿ ಮಾತನಾಡಿ, ದೇಶದಲ್ಲಿ ಮೊದಲಿನಿಂದಲೂ ಎಲ್ಲ ಧರ್ಮಿಯರು ಸಹೋದರ ಭಾವನೆಯಲ್ಲಿ ಒಗ್ಗಟ್ಟಿನಿಂದ ಜೀವನ ನಡೆಸುತ್ತಿದ್ದಾರೆ. ಹಾಗೆಯೇ ಪ್ರತಿಯೊಬ್ಬರೂ ಸೌಹಾರ್ದ ವಾತಾವರಣ ಕಾಪಾಡಬೇಕು. ಇದರಲ್ಲಿ ಯುವ ಜನತೆ ಮಾದರಿಯಾಗಿರಬೇಕು ಎಂದರು.

ಈಗಾಗಲೇ ಕರೊನಾ ಮಾರ್ಗಸೂಚಿ ನಿಯಮಗಳ ಪಾಲನೆ ಬಗ್ಗೆ ನಿಗಾ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದಕ್ಕೆ ಅನುಗುಣವಾಗಿ ಜನರು ಅಗತ್ಯ ಸಹಕಾರ ನೀಡಿದಾಗ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ನಾಲ್ಕನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅರ್ಹರು ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು. ಕಳೆದ ಎರಡು ವರ್ಷಗಳಿಂದಲೂ ಕರೊನಾ ಸೋಂಕು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಜನರಿಗೆ ಆರೋಗ್ಯ ಸೇವೆ ಒದಗಿಸಲು ಬೃಹತ್ ಮೇಳವನ್ನು ಕೈಗೊಳ್ಳಲಾಗಿದೆ. ಇದರಲ್ಲಿ 1500ಕ್ಕೂ ಹೆಚ್ಚು ನುರಿತ ತಜ್ಞರಿಂದ ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಣೆಯ ವ್ಯವಸ್ಥೆ ಇರಲಿದ್ದು ಅಗತ್ಯವುಳ್ಳವರಿಗೆ ಉಚಿತವಾಗಿ ಶಸಚಿಕಿತ್ಸೆ ಕೈಗೊಳ್ಳಲಾಗುತ್ತದೆ. ಕನಿಷ್ಠ 60 ಸಾವಿರ ಮಂದಿ ಸದ್ವಿನಿಯೋಗಪಡಿಸಿಕೊಳ್ಳುವ ನಿರೀಕ್ಷೆ ಇದೆ ಎಂದರು.

ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದ್ ರೆಡ್ಡಿ ಬಾಬು, ವಕ್ಫ್ ಬೋರ್ಡ್ ಸಮಿತಿ ಜಿಲ್ಲಾಧ್ಯಕ್ಷ ಇಂತಿಯಾಜ್, ನಗರಸಭೆ ಸದಸ್ಯರಾದ ಗಜೇಂದ್ರ, ಸತೀಶ್ ಮತ್ತಿತರರು ಇದ್ದರು.