ಪಾಂಡವಪುರ ತಾಲೂಕಿನ ಎಣ್ಣೆಹೊಳೆಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟಾರ್ಕ್ ಸಂಸ್ಥೆ ನಿರ್ಮಿಸಿರುವ ಹೈಟೆಕ್ ಶೌಚಗೃಹವನ್ನು ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಉದ್ಘಾಟಿಸಿದರು. ಧೀರೇಶ್, ಅಭಿಲಾಷ್‌ಗೌಡ, ಸುಬ್ಬಯ್ಯ, ವೈ.ಪಿ.ಮಂಜು ಇತರರಿದ್ದರು. 
ಜಿಲ್ಲೆ

ಸೌಲಭ್ಯ ಸಿಕ್ಕರೆ ಸರ್ಕಾರಿ ಶಾಲೆ ಮಕ್ಕಳಿಂದಲೂ ಸಾಧನೆ

ಪಾಂಡವಪುರ: ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಮೂಲಸೌಕರ್ಯ ಸಿಕ್ಕರೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾರೆ ಎಂದು ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.

ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ರೋಟಾರ್ಕ್ ಕಂಪನಿ ಸಿಎಸ್‌ಆರ್ ಅನುದಾನದಡಿ ನಿರ್ಮಿಸಿರುವ ಹೈಟೆಕ್ ಶೌಚಗೃಹವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಉಳಿವಿಗಾಗಿ ಖಾಸಗಿ ಸಂಸ್ಥೆಗಳು ಹಾಗೂ ಉದ್ಯಮಿಗಳು ಕೈಜೋಡಿಸಿದರೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿದೆ. ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳು ಮತ್ತು ಉದ್ಯಮಿಗಳು ಆಲೋಚಿಸಬೇಕು ಎಂದರು.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ನಮ್ಮಂತಹ ಹಲವರು ವಿದ್ಯಾಭ್ಯಾಸ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳಿಗೆ ಸಮರ್ಪಕವಾದ ಸೌಕರ್ಯಗಳನ್ನು ಒದಗಿಸಿದರೆ ರಾಜ್ಯದ ಪ್ರತಿಷ್ಠಿತ ಖಾಸಗಿ ಶಾಲೆಗಳನ್ನು ಹಿಂದಿಕ್ಕುವ ಸಾಮರ್ಥ್ಯ ಸರ್ಕಾರಿ ಶಾಲೆಗಳಿಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ ಎಂದು ಹೇಳಿದರು.

ಈ ವೇಳೆ ರೋಟಾರ್ಕ್ ಸಂಸ್ಥೆಯ ಧೀರೇಶ್, ಅಭಿಲಾಷ್‌ಗೌಡ, ರೋಹಿತ್‌ಕುಮಾರ್, ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸುಬ್ಬಯ್ಯ, ಗ್ರಾ.ಪಂ. ಸದಸ್ಯ ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು, ರೈತಸಂಘದ ಹರವು ಪ್ರಕಾಶ್, ವೈ.ಜಿ.ರಘು, ಲಕ್ಷ್ಮಮ್ಮ, ಪ್ರಕಾಶ್, ರೋಹಿತ್ ಇತರರಿದ್ದರು.