ಜಿಲ್ಲೆ

ಸೌಲಭ್ಯ ಪಡೆಯಲು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಅವಕಾಶ: ಶಾಸಕ ಶರತ್ ಬಚ್ಚೇಗೌಡ

ಹೊಸಕೋಟೆ: ತಾಲೂಕಿನಲ್ಲಿ ಅಲ್ಪಸಂಖ್ಯಾತರರ ಸಂಖ್ಯೆ ಹೆಚ್ಚಿದ್ದು, ಎಲ್ಲರಿಗೂ ಸಮನಾದ ಸ್ಥಾನ ನೀಡಿ ಪ್ರಜಾಪ್ರಭುತ್ವದಲ್ಲಿ ಸೌಲಭ್ಯ ಪಡೆಯಲು ಅವಕಾಶ ನೀಡಿರುವುದು ಉತ್ತಮ ಸಂಗತಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ನಗರದ ದಂಡುಪಾಳ್ಯ ವಾರ್ಡ್‌ನಲ್ಲಿ ಗುರುವಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತರಾಗಲಿ, ಬಹುಸಂಖ್ಯಾತರಾಗಲಿ ಎಲ್ಲರಿಗೂ ಸಮಾನ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಸರ್ಕಾರ ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು. ಜಿಪಂ ಸಿಇಒ ರವಿಕುಮಾರ್ ಮಾತನಾಡಿ, ಮುಸಲ್ಮಾನರು, ಬೌದ್ಧರು, ಜೈನರು ಕ್ರಿಶ್ಚಿಯನ್ನರು ಹೀಗೆ ಎಲ್ಲ ಅಲ್ಪಸಂಖ್ಯಾತರಿಗೆ ಸಮನಾದ ಸೌಲಭ್ಯಗಳು ದೊರೆಯುವ ನಿಟ್ಟಿನಲ್ಲಿ ಇಲಾಖೆ ವಿಸ್ತರಣಾಧಿಕಾರಿಗಳ ನೂತನ ಕಟ್ಟಡದಲ್ಲಿ ಕಚೇರಿ ಪ್ರಾರಂಭ ಮಾಡಲಾಗಿದೆ ಎಂದರು. ಜಿಪಂ ಅಧ್ಯಕ್ಷ ವಿ. ಪ್ರಸಾದ್, ಉಪಾಧ್ಯಕ್ಷೆ ರೂಪಾ ಮರಿಯಪ್ಪ, ಸದಸ್ಯರಾದ ಸಿ. ನಾಗರಾಜ್, ವೈಎಸ್‌ಎಂ ಮಂಜುನಾಥ್, ವಿಸ್ತರಣಾಧಿಕಾರಿ ಶಶಿಧರ್, ನಗರಸಭೆ ಅಧ್ಯಕ್ಷ ಅರುಣ್ ಕುಮಾರ್, ಟೌನ್ ಬ್ಯಾಂಕ್ ನಿರ್ದೇಶಕ ಅಪ್ಸರ್ ಹಾಜರಿದ್ದರು.

ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಾನು ಶಾಸಕನಾಗಿದ್ದಾಗ ಯೋಜನಾ ಪ್ರಾಧಿಕಾರದಿಂದ ಈ ಜಾಗವನ್ನು ಮಂಜೂರು ಮಾಡಿಸಿ ಈಗ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಉತ್ತಮ ಸೌಲಭ್ಯ ನೀಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಎಂಟಿಬಿ ನಾಗರಾಜ್ ಪೌರಾಡಳಿತ ಹಾಗೂ ಸಕ್ಕರೆ ಖಾತೆ ಸಚಿವ