ಜಿಲ್ಲೆ

ಸೌಲಭ್ಯ ನೀಡಲು ಮೀನಮೇಷ ಬೇಡ

ಸಾಗರ: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ತಲುಪಬೇಕಾದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಮೀನಮೇಷ ಬೇಡ. ಬೇರೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನೀಡುವಷ್ಟೇ ಆದ್ಯತೆ ಈ ಜನಾಂಗದ ಅಭಿವೃದ್ಧಿಗೂ ನೀಡಿ ಎಂದು ಜಿಪಂ ಸದಸ್ಯೆ ಅನಿತಾ ಕುಮಾರಿ ಸೂಚಿಸಿದರು.

ತಾಪಂ ಸಾಮರ್ಥ್ಯ ಸೌಧದಲ್ಲಿ ಸೋಮವಾರ ಸಮಾಜಕಲ್ಯಾಣ ಇಲಾಖೆಯಿಂದ ಅನುಸೂಚಿತ ಉಪ ಹಂಚಿಕೆ ಮತ್ತು ಬುಡಕಟ್ಟುಗಳ ಉಪಹಂಚಿಕೆಯಡಿ ಆಯೋಜಿಸಿದ್ದ ತಾಲೂಕು ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಸರ್ಕಾರದಿಂದ ಬಂದ ಸೌಲಭ್ಯಗಳನ್ನು ಎಸ್ಸಿ, ಎಸ್ಟಿ ಜನಾಂಗಕ್ಕೆ ತಲುಪಿಸಲು ಆಸಕ್ತಿ ತೋರದಿರುವುದು ದುರದೃಷ್ಟಕರ ಸಂಗತಿ ಎಂದರು.

ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗಗಳ ಅಭಿವೃದ್ಧಿಗೆ ಬಂದ ಅನುದಾನವನ್ನು ಇತರ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಸಭೆಯಲ್ಲಿ ಫಲಾನುಭವಿಗಳ ಅಂಕಿ-ಅಂಶ ಸಹಿತ ವಿವರ ಒದಗಿಸಬೇಕು. ಇದರಿಂದ ಯೋಜನೆ ತಲುಪಿದೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಬಹುದು ಎಂದು ತಿಳಿಸಿದರು.

ಕಳೆದ ವರ್ಷ ಹಿತ್ತಲಕೋಳಿ ಯೋಜನೆಯಡಿ 75 ಫಲಾನುಭವಿಗಳಿಗೆ ಕೋಳಿಮರಿ ಹಂಚಲಾಗಿತ್ತು. ಈ ಪೈಕಿ ಪ.ಜಾ. ಮತ್ತು ಪಂಗಡದ 25 ಕುಟುಂಬಗಳಿಗೆ ವಿತರಿಸಲಾಗಿತ್ತು. ದುರದೃಷ್ಟವಶಾತ್ ಈ ಸಾಲಿನಲ್ಲಿ ಕೇವಲ 20 ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಸರ್ಕಾರ ಸೂಚಿಸಿದೆ. ಪ.ಜಾ. ಮತ್ತು ಪಂಗಡದ 4 ಕುಟುಂಬವನ್ನು ಮಾತ್ರ ಯೋಜನೆಗೆ ಪರಿಗಣಿಸಲಾಗಿದೆ ಎಂದರು.

ತಾಪಂ ಇಒ ಪುಷ್ಪಾ ಕಮ್ಮಾರ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಆನಂದಿ ಲಿಂಗರಾಜ್, ತಹಸೀಲ್ದಾರ್ ಚಂದ್ರಶೇಖರ ನಾಯ್್ಕ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಇಕ್ಬಾಲ್ ಜಾತಿಗೇರ್ ಹಾಜರಿದ್ದರು.