ಜಿಲ್ಲೆ

ಸೌಜನ್ಯ ಕೊಲೆ ಪ್ರಕರಣ, ಕಾನೂನು ಹೋರಾಟ ಮುಂದುವರಿಕೆ- ಮಹೇಶ್ ಶೆಟ್ಟಿ

ದಾವಣಗೆರೆ: ಧರ್ಮಸ್ಥಳದ ಬಾಲಕಿ ಸೌಜನ್ಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಪ್ರಜಾಪ್ರಭುತ್ವ ವೇದಿಕೆ ರಾಜ್ಯಾಧ್ಯಕ್ಷ ಮಹೇಶ್‌ಶೆಟ್ಟಿ ತಿಮರೋಡಿ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 11 ವರ್ಷದ ಹಿಂದೆ ನಡೆದಿದ್ದ ಪ್ರಕರಣದಲ್ಲಿ ಇದುವರೆಗೆ ನ್ಯಾಯ ದೊರೆತಿಲ್ಲ. ಇದರ ಹಿಂದೆ ಷಡ್ಯಂತ್ರ ನಡೆದಿದೆ. ಕೂಡಲೆ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸೌಜನ್ಯ ಕುಟುಂಬದ ಸ್ಥಿತಿ ಸ್ಮಶಾನದಂತಾಗಿದೆ. ನನಗೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಂಬಿಕೆ ಇದ್ದು ನ್ಯಾಯ ಸಿಗುವ ವಿಶ್ವಾಸವಿದೆ. ಈಗಲೂ ಪ್ರಕರಣದ ಮರು ತನಿಖೆಗೆ ಆಗ್ರಹಿಸುತ್ತಿದ್ದೇವೆ. ತನಿಖೆಯ ಹಾದಿ ತಪ್ಪಿಸಿದವರನ್ನು ಅಣ್ಣಪ್ಪ-ಮಂಜುನಾಥಸ್ವಾಮಿ ನೋಡಿಕೊಳ್ಳುವ ವಿಶ್ವಾಸವಿದೆ ಎಂದರು. ಮರು ತನಿಖೆ ಬೇಕಿಲ್ಲ ಎಂದಿರುವ ಗೃಹ ಸಚಿವರಿಗೆ ತಿಳಿವಳಿಕೆ ಕೊರತೆ ಇದೆ ಎಂದು ಟೀಕಿಸಿದರು. ಹೋರಾಟದ ಹಿನ್ನೆಲೆಯಲ್ಲಿ ನನಗೆ ಸರ್ಕಾರ ಗನ್‌ಮ್ಯಾನ್ ಒದಗಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನನಗೆ ಅದರ ಬಗ್ಗೆ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿಯಲ್ಲಿ ಹಿಂದು ಜಾಗರಣ ವೇದಿಕೆ ಮುಖಂಡ ಅನಿಲ್‌ಕುಮಾರ್, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಶ್ರೀಧರ್, ರಾಹುಲ್, ಪರಶುರಾಂ, ರಾಜು, ಮಾರ್ಕಂಡೇಯ ಇದ್ದರು.