ಚಾಮರಾಜನಗರ: ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸುವ ಸ್ಪರ್ಧಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾವರು ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶೃತಿ ಸಲಹೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾನಪದ ಪ್ರಕಾರಗಳು ಹಾಗೂ ಜಾನಪದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹಾಗಾಗಿಯೇ ಜಿಲ್ಲೆಯನ್ನು ಜಾನಪದಗಳ ತವರೂರು ಎಂದು ಕರೆಯಲಾಗುತ್ತದೆ. ಈ ನಿಟ್ಟಿನಲ್ಲಿ ಯುವಕರು ತಮ್ಮಲ್ಲಿರುವ ಕಲಾಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿದೆ ಎಂದು ತಿಳಿಸಿದರು.
ಯುವಜನೋತ್ಸವದಲ್ಲಿ ಜಾನಪದ ಗೀತೆ, ನೃತ್ಯ, ಕವಿತೆ, ಕಥೆ, ಚಿತ್ರಕಲೆ ಹಾಗೂ ಇನ್ನಿತರೆ ಕಲಾಪ್ರಕಾರಗಳು ಇದ್ದು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿಗಳನ್ನು ಪಡೆದುಕೊಳ್ಳಬೇಕು. ರಾಜ್ಯಮಟ್ಟದಲ್ಲೂ ಭಾಗವಹಿಸಿ ಜಿಲ್ಲೆಯ ಕೀರ್ತಿಯನ್ನು ಬೆಳಗಿಸಬೇಕು ಎಂದು ಹೇಳಿದರು.
ನಗರಸಭಾ ಸದಸ್ಯ ಎಂ.ಮಹೇಶ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಯುವಜನಾಂಗ ತಮಗೆ ದೊರೆತಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯುವಕರಿಗೆ ಸಹಕಾರಿಯಾಗುವಂತೆ ಯೂತ್ ಹಾಸ್ಟೆಲ್ ನಿರ್ಮಾಣ ಮಾಡಬೇಕು. ಜಿಲ್ಲೆಯ ಮುಖ್ಯ ರಸ್ತೆಗಳಲ್ಲಿ ಜಾನಪದ ಕಲೆಗಳ ತವರೂರು ಎಂದು ನಗರಸಭೆ ವತಿಯಿಂದ ಬೃಹತ್ ನಾಮಲಕಗಳನ್ನು ಅಳವಡಿಸಲಾಗಿದ್ದು, ಇದನ್ನು ಸರ್ಕಾರ ಅಧಿಕೃತವಾಗಿ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್, ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್.ಋಗ್ವೇದಿ, ಜಿ.ಬಂಗಾರು, ಜಾನಪದ ಹಾಡುಗಾರ ಸಿ.ಎಂ.ನರಸಿಂಹಮೂರ್ತಿ, ದೇವಾನಂದ ವರಪ್ರಸಾದ್, ಡಾ.ಬಿ.ಎಸ್.ಜಗದೀಶ್, ಅಖಿಲ್, ಸಾಹಿತಿ ಶೀಲಾ ಸತ್ಯೇಂದ್ರಸ್ವಾಮಿ, ಚಿತ್ರಕಲಾವಿದ ಮಧುಸೂದನ್, ಪದ್ಮಾಪುರುಷೋತ್ತಮ್, ಡಾ.ಮಹೇಶ್ ಕೋಡಿಉಗನೆ, ಕಹಳೆ ರವಿಚಂದ್ರ ಹಾಗೂ ಇತರರು ಹಾಜರಿದ್ದರು.
ಸಂಘ-ಸಂಸ್ಥೆಗಳಿಗೆ ಮಾಹಿತಿ ಇಲ್ಲ:
ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯಲ್ಲಿ ನೂರಾರು ಯುವಕರ ಸಂಘ-ಸಂಸ್ಥೆಗಳು ನೋಂದಾಯಿಸಿಕೊಂಡಿದ್ದು, ಅವರಿಗೆ ಯಾವುದೇ ಮಾಹಿತಿ ನೀಡಿದೆ ಕಾರ್ಯಕ್ರಮನಡೆಸಲಾಗುತ್ತಿದೆ ಎಂದು ಯುವ ಕಲಾವಿದರ ಬಳಗದವರು ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಳಗದ ಸದಸ್ಯ ಶಿವಶಂಕರ್ ಚಟ್ಟು ಮಾತನಾಡಿ, ಇಲಾಖೆಯವರು ಕೇವಲ ಕಾಲೇಜು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಕಾರ್ಯಕ್ರಮ ಯಶಸ್ವಿ ಎನ್ನುತ್ತಿದ್ದಾರೆ. ಈ ಬಾರಿಯ ಯುವಜನೋತ್ಸವದಲ್ಲಿ ಭಾವಗೀತೆ, ಭಕ್ತಗೀತೆ, ಸುಗಮ ಸಂಗೀತ, ಏಕಪಾತ್ರಾಭಿನಯ ಹಾಗೂ ಇನ್ನಿತರೆ ಕಲಾ ಪ್ರಕಾರಗಳನ್ನು ಕೈಬಿಡಲಾಗಿದೆ. ಇಲಾಖೆಯಲ್ಲಿ ನಿಂತುಹೋಗಿರುವ ಕಾರ್ಯಕ್ರಮಗಳನ್ನು ಮತ್ತೆ ಆರಂಭಿಸಬೇಕು. ಯುವಜನ ಮೇಳದಲ್ಲಿ 35 ವರ್ಷದೊಳಗಿನ ಯುವಕರಿಗೂ ಅವಕಾಶ ಕಲ್ಪಿಸಬೇಕು. ತೀರ್ಪುಗಾರರು ವರ್ಷವರ್ಷವೂ ಅವರೇ ಬರುತ್ತಿದ್ದು, ಇದರಲ್ಲಿ ಬದಲಾವಣೆಗಳು ಆಗಬೇಕು ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಈ ವೇಳೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶೃತಿ ಅವರು ಪ್ರತಿಕ್ರಿಯಿಸಿ, ಕಲಾವಿದರು ತಮ್ಮ ಬೇಡಿಕೆಗಳನ್ನು ಸಲ್ಲಿಸಿದರೇ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ವಿವಿಧ ಸ್ಪರ್ಧೆಗಳ ಆಯೋಜನೆ:
ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ ಗಾಯನ, ಕವಿತೆ ಬರೆಯುವುದು, ಕಥೆ ಬರೆಯುವುದು, ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಯುವ ಜನಾಂಗದಲ್ಲಿ ಆಸಕ್ತಮೂಡಿಸುವ ಸಂಬಂಧ ಆಯೋಜಿಸಿದ್ದ ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ಗಮನಸೆಳೆಯಿತು. ಯುವಕರು ತಯಾರಿಸಿದ್ದ ವಿಜ್ಞಾನದ ಮಾಡೆಲ್‌ಗಳನ್ನು ಯುಜನಾಂಗ ಕುತೂಹಲದಿಂದ ವೀಕ್ಷಣೆ ಮಾಡಿದರು. ಚಿತ್ರಕಲೆ ಸ್ಪರ್ಧೆಯಲ್ಲಿ 40 ಕ್ಕಿಂತಲೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದರು. ಯುವಕರ ಜಾನಪದ ನೃತ್ಯ ನೋಡುಗರ ಗಮನ ಸೆಳೆಯಿತು.
ಯುವಜನಾಂಗದಲ್ಲಿ ಅಡಗಿರುವ ಸುಪ್ತವಾದ ಪ್ರತಿಭೆಯನ್ನು ಹೊರತರಲು ಯುವಜನೋತ್ಸವದಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿದೆ. ಯುವಕರು ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಬೇಕು. ಈ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತರಬೇಕು.
-ಸುರೇಶ್, ಅಧ್ಯಕ್ಷ, ನಗರಸಭೆ, ಚಾಮರಾಜನಗರ