ಜಿಲ್ಲೆ

ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ಹನೂರು: ಪ್ರತಿಯೊಬ್ಬರೂ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವುದರ ಜತೆಗೆ ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಪಟ್ಟಣದ ಶ್ರೀ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಶನಿವಾರ ಜೀನಿಯಸ್ ಫುಟ್‌ಬಾಲ್ ಕ್ಲಬ್ ಹನೂರು ಇವರ ವತಿಯಿಂದ ಆಯೋಜಿಸಿದ್ದ ಫುಟ್‌ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಹನೂರು ತಾಲೂಕಿನಲ್ಲಿ ಹೆಚ್ಚಿನ ಕ್ರೀಡಾಪಟುಗಳಿದ್ದು, ಕ್ರೀಡೆಗೆ ಹೆಸರುವಾಸಿಯಾಗಿದೆ. ಇಲ್ಲಿ ಹೆಚ್ಚು ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಲೇ ಇರುತ್ತವೆ. ಆದರೆ ಇದೀಗ ಆಸಕ್ತಿ ವಹಿಸಿ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಇದರಿಂದ ಪ್ರತಿಭೆಯನ್ನು ಹೊರಸೂಸಲು ಉತ್ತೇಜನದ ಜತೆಗೆ ಸ್ಫೂರ್ತಿ ನೀಡಿದಂತಾಗಿದೆ. ಆದ್ದರಿಂದ ಕ್ರೀಡೆಯಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಗುವುದರ ಮೂಲಕ ಸಾಧನೆ ಮಾಡುವಂತಾಗಬೇಕು. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಕ್ಲಬ್ ಅಧ್ಯಕ್ಷ ಅಜೀತ್ ಮಾತನಾಡಿ, ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್, ಶಟಲ್ ಬ್ಯಾಡ್ಮಿಂಟನ್ ಕೋಟ್ ಹಾಗೂ ಜಿಮ್ ಸ್ಥಾಪಿಸುವುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ಈಗಾಗಲೇ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಲಾಗಿದ್ದು, ಅಗತ್ಯ ಸೌಕರ್ಯವನ್ನು ಒದಗಿಸುವುದರ ಮೂಲಕ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕ ಉದ್ದನೂರು ಪ್ರಸಾದ್, ಆರ್‌ಎಫ್‌ಒ ಪ್ರವೀಣ್, ಶಿಕ್ಷಕ ಶ್ರೀನಿವಾಸನಾಯ್ಡು, ಮುಖಂಡರಾದ ಅಕ್ರಂಪಾಷ, ಮಂಜೇಶ್, ರಾಜಣ್ಣ ಹಾಗೂ ಇನ್ನಿತರರು ಇದ್ದರು.