ಜಿಲ್ಲೆ

ಸೋಲು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿ

ಪಾಂಡವಪುರ: ತಾಲೂಕಿನ ಕ್ಯಾತನಹಳ್ಳಿಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಮಂಡ್ಯ, ಶಾಲಾ ಶಿಕ್ಷಣ ಇಲಾಖೆ ಪಾಂಡವಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶ್ರೀ ವಿಶ್ವೇಶ್ವರಯ್ಯ ಎಜುಕೇಷನ್ ಟ್ರಸ್ಟ್ ವತಿಯಿಂದ ಬುಧವಾರ ಆಯೋಜಿಸಿದ್ದ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲೆ ವಿಭಾಗದ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿಯನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು.


ಕ್ರೀಡಾ ಗ್ರಾಮವಾದ ಕ್ಯಾತನಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ದೇಹ ಸದೃಢವಾಗಿದ್ದರೆ ಮನಸ್ಸು ಚೆನ್ನಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಮುಖ್ಯ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿರುವ ಕ್ರೀಡಾಪಟುಗಳಿಗೆ ಶುಭವಾಗಲಿ ಎಂದು ಹಾರೈಸಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್ ಮಾತನಾಡಿ, ಕ್ರೀಡೆಯಲ್ಲಿ ಸೋಲು, ಗೆಲುವು ಇದ್ದಂತೆ ಬದುಕಿನಲ್ಲಿ ಕಷ್ಟ, ಸುಖ ಎಂಬುದು ಇರುತ್ತದೆ. ವಿದ್ಯಾರ್ಥಿ ದಿಸೆಯಿಂದಲೇ ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಔದರ್ಯ ತೋರಿದರೆ ಬದುಕಿನಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದು ಎಂದರು.


ಕ್ರೀಡಾಕೂಟದಲ್ಲಿ ಪಾಂಡವಪುರ, ಮಳವಳ್ಳಿ, ಮದ್ದೂರು, ನಾಗಮಂಗಲ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಮಂಡ್ಯ ದಕ್ಷಿಣ ವಲಯ, ಮಂಡ್ಯ ಉತ್ತರ ವಲಯ ಹಾಗೂ ಮಂಡ್ಯ ಗ್ರಾಮಾಂತರ ಶಾಲೆಯ ಕ್ರೀಡಾಪಟುಗಳು ಭಾಗವಹಿಸಿದ್ದರು.


ವಿಶ್ವೇಶ್ವರಯ್ಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಸುಬ್ಬಯ್ಯ, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಶಿವಲಿಂಗಯ್ಯ, ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಬಸವರಾಜು, ಮಂಜುನಾಥ್, ಮಹೇಶ್, ಶ್ರೀನಿವಾಸ್ ಇತರರಿದ್ದರು.