ಜಿಲ್ಲೆ

ಸೋಲಿನಿಂದ ಎಂದೂ ಧೃತಿಗೆಡುವುದಿಲ್ಲ

ಮದ್ದೂರು: ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ರಾಜಕೀಯದಲ್ಲಿ ನಾನು ಎರಡನ್ನು ಸಮಚಿತ್ತದಿಂದ ಸ್ವೀಕರಿಸಿದ್ದೇನೆ. ಗೆದ್ದಾಗ ಹಿಗ್ಗಿಲ್ಲ, ಸೋತಾಗ ಕುಗ್ಗಿಲ್ಲ. ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು. ಆದರೆ ಸೋಲಿನಿಂದ ನಾನು ಎಂದಿಗೂ ಧೃತಿಗೆಡುವುದಿಲ್ಲ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.


ನಾನು ಶಾಸಕನಾಗಿದ್ದ ಅವಧಿಯಲ್ಲಿ ನೀರಾವರಿ, ಶಿಕ್ಷಣ, ಆರೋಗ್ಯ ಮತ್ತು ಮೂಲ ಸೌಕರ್ಯಕ್ಕೆೆ ಹೆಚ್ಚಿನ ಒತ್ತು ನೀಡಿದ್ದೇನೆ. ಈ ಬಗ್ಗೆ ನನಗೆ ತೃಪ್ತಿ ಇದೆ ಎಂದು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.


ನನ್ನ 10 ವರ್ಷಗಳ ಅಧಿಕಾರದ ಅವಧಿಯಲ್ಲಿ 4 ಸಾವಿರ ಕೋಟಿ ರೂ. ಗೂ ಹೆಚ್ಚು ಅನುದಾನ ತಂದು ಕ್ಷೇತ್ರದ ಸರ್ವಾಂರ್ಗಿಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ವಿರೋಧ ಪಕ್ಷದ ಶಾಸಕನಾಗಿ ಇಷ್ಟೊಂದು ಅನುದಾನ ತಂದು ಅಭಿವೃದ್ಧಿ ಮಾಡಿರುವುದು ಸಂತೋಷ ತಂದಿದೆ. ನನಗೆ ಅಧಿಕಾರವಿಲ್ಲದರೂ ಮುಂದಿನ ದಿನಗಳಲ್ಲಿ ವಾರಕ್ಕೆ 5 ದಿನ ಕ್ಷೇತ್ರದಲ್ಲಿದ್ದು, ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತೇನೆ. ಈ ಚುನಾವಣೆಯಲ್ಲಿ ನನಗೆ ಸಹಕಾರ ನೀಡಿದ ಕ್ಷೇತ್ರದ ಮತದಾರರು, ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.


ನಾನು ಶಾಸಕ, ಸಚಿವನಾಗಿದ್ದಾಗ ರಾಷ್ಟ್ರ ಮತ್ತು ವಿದೇಶ ಪ್ರವಾಸ ಮಾಡುವ ಅವಕಾಶಗಳು ಒದಗಿ ಬಂದವು. ನಾನು ವಾರಗಟ್ಟಲೇ ಕ್ಷೇತ್ರದ ಜನರನ್ನು ಬಿಟ್ಟು ಇರಬೇಕಾಗುತ್ತದೆ ಎಂಬ ಒಂದೇ ಉದ್ದೇಶದಿಂದ ಯಾವುದೇ ಪ್ರವಾಸಕ್ಕೆ ಹೋಗಿರಲಿಲ್ಲ. ನನಗೆ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯವಾಗಿತ್ತು ಎಂದರು.

ಮುಂಬರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಜೆಡಿಎಸ್‌ನ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯತಂತ್ರ ರೂಪಿಸಲಾಗುವುದು ಎಂದರು.