ನಾಗಮಂಗಲ: ಮಾಜಿ ಶಾಸಕ ಸುರೇಶ್‌ಗೌಡ ಸೋಲಿನ ಹತಾಶೆಯಿಂದ ಹೊರಬರುವ ಮೂಲಕ ತಾವು ನೀಡುವ ಹೇಳಿಕೆಗಳ ಮೇಲೆ ನಿಗಾ ಇಡಬೇಕು ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ಹೇಳಿದರು.
ಮಾಜಿ ಶಾಸಕರು ಕೃತಜ್ಞತಾ ಸಭೆಯಲ್ಲಿ ‘ಕಡ್ಡಿ ಅಲ್ಲಾಡಿಸುವ’ ಬಗ್ಗೆ ಮಾತನಾಡಿದ್ದಾರೆ.ಅವರು ಮೊದಲು ಭಾಷಾ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಯಬೇಕು. ಬಡ ಬ್ರಾಹ್ಮಣರ ಜಾಗವನ್ನು ಕಬಳಿಸುವ ಜತೆಗೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಚುನಾವಣೆಗೂ ಮೊದಲೇ ನಾವು ಪತ್ರಿಕಾ ಹೇಳಿಕೆ ನೀಡಿದ್ದೇವೆ.ಇದೀಗ ಚಲುವರಾಯಸ್ವಾಮಿ ಅವರ ಹೆಸರನ್ನು ಬಳಸುವುದು ಅವರ ಸೋಲಿನ ಹತಾಶೆಯನ್ನು ಸಾಕ್ಷೀಕರಿಸುತ್ತದೆ. ಸುರೇಶ್‌ಗೌಡರ ಲಂಚದ ಬಗ್ಗೆ ನಾವು ಹೇಳುವುದಕ್ಕಿಂತ ಅವರದೇ ಪಕ್ಷದ ವಿಧಾನ ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ ನೇರ ಆರೋಪ ಮಾಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಚುನಾವಣೆಗೆ ಮೊದಲಿನಿಂದಲೂ ನಾವು ಮಾಡುತ್ತಿದ್ದ ಇವರ ಅಕ್ರಮದ ಆರೋಪಗಳಿಗೆ ಉತ್ತರಿಸದೆ ಇರುತ್ತಿದ್ದ ಇವರು, ಈಗ ಸೋಲಿನ ಹತಾಶೆಯಿಂದ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತಿಮ್ಮರಾಯಿಗೌಡ, ಶರತ್‌ರಾಮಣ್ಣ, ತಟ್ಟಹಳ್ಳಿ ನರಸಿಂಹಮೂರ್ತಿ, ರವಿಕಾಂತೇಗೌಡ ಮತ್ತಿತರರಿದ್ದರು.