ಹಾಸನ: ದಿವಂಗತ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಬದುಕಿದ್ದಾಗ ಅವರ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲು ಮಾಡಿಸಿದ್ದ ಸ್ಥಳೀಯ ಶಾಸಕ ಪ್ರೀತಂಗೌಡರು, ಈಗ ಅನುಕಂಪ ತೋರಿಸುತ್ತಿರುವುದು ಅವರ ಕೀಳುಮಟ್ಟದ ರಾಜಕೀಯವನ್ನು ಎತ್ತಿ ತೋರುತ್ತಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ, ಜೆಡಿಎಸ್ ಮುಖಂಡ ಎಚ್.ಪಿ. ಸ್ವರೂಪ್ ಪ್ರಕಾಶ್ ಟೀಕಿಸಿದರು.
ನಗರಸಭೆ 16ನೇ ವಾರ್ಡ್‌ನ ಉಪ ಚುನಾವಣೆಯಲ್ಲಿ ದಿವಂಗತ ಪ್ರಶಾಂತ್ ನಾಗರಾಜ್ ಕುಟುಂಬದಿಂದ ಯಾರೇ ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೂ ಬಿಜೆಪಿಯಿಂದ ಅಭ್ಯರ್ಥಿ ಹಾಕದೆ ಬೆಂಬಲ ನೀಡುವುದಾಗಿ ಶಾಸಕರು ಹೇಳುತ್ತಿರುವುದು ಸೋಲಿನ ಭೀತಿಯಿಂದ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
ಈ ಹಿಂದೆ ಶಾಸಕರ ಮನೆ ಮೇಲೆ ಕಲ್ಲೆಸೆತ ಪ್ರಕರಣ ಹಾಗೂ ಉದ್ದೂರು ರಸ್ತೆ ಕಾಮಗಾರಿ ವೇಳೆ ಬಿಜೆಪಿ ಪುಂಡರು ನಡೆಸಿದ್ದ ಗಲಾಟೆ ಪ್ರಕರಣದಲ್ಲಿ ಜಡಿಎಸ್‌ನ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಅವರ ಪಾತ್ರ ಇಲ್ಲದೇ ಇದ್ದರೂ, ಅವರ ವಿರುದ್ಧ ಶಾಸಕರು ಎರಡು ಬಾರಿ ಎಫ್‌ಐಆರ್ ದಾಖಲು ಮಾಡಿಸಿದ್ದರು. ಕಟ್ಟಿನಕೆರೆ ಮಾರುಕಟ್ಟೆ ವ್ಯವಹಾರಕ್ಕೂ ತೊಂದರೆ ನೀಡಿದ್ದರು. ಇದನ್ನು ಪ್ರಶಾಂತ್ ನಾಗರಾಜ್ ಅವರೇ ತಮ್ಮ ಬಳಿ ಅನೇಕ ಬಾರಿ ಪ್ರಸ್ತಾಪಿಸಿದ್ದರು ಎಂದು ತಿಳಿಸಿದರು.
ಅವರು ಬದುಕಿದ್ದಾಗ ಅಷ್ಟೆಲ್ಲಾ ಕಿರುಕುಳ ನೀಡಿ ಈಗ ಉಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬೆಂಬಲ ನೀಡುವ ನಾಟಕ ಆಡುತ್ತಿದ್ದಾರೆ. ಈ ಪ್ರೀತಿ, ಅನುಕಂಪ ಅವರು ಬದುಕಿದ್ದಾಗ ಏಕೆ ಇರಲಿಲ್ಲ ಎಂದು ಪ್ರಶ್ನಿಸಿದರು.
ನಗರಸಭೆ ಸದಸ್ಯ ಪ್ರಶಾಂತ್ ಅವರ ಕೊಲೆ ನಡೆದಾಗ ಅವರ ಮುಖ ನೋಡಲು ಸಹ ಶಾಸಕರು ಬರಲಿಲ್ಲ. ಜೆಡಿಎಸ್ ನಾಯಕರಾದ ಮಾಜಿ ಸಚಿವ ಎಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಅವರೊಂದಿಗೆ ಸೇರಿ ನಾವೇ ಮುಂದೆ ನಿಂತು ಎಲ್ಲಾ ಕಾರ್ಯ ಮಾಡಿದೆವು. ಈಗಲೂ, ಮುಂದೆಯೂ ಅವರ ಕುಟುಂಬದ ಜೊತೆ ನಾವು ಇರುತ್ತೇವೆ ಎಂದರು.
ನವೀನ್ ಅಭ್ಯರ್ಥಿ:
ನಗರಸಭೆ 16ನೇ ವಾರ್ಡ್‌ನ ಉಪ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಪ್ರಶಾಂತ್ ಅವರ ಸಹೋದರ ನವೀನ್ ಸ್ಪರ್ಧೆ ಮಾಡಲಿದ್ದಾರೆ. ಶಾಸಕರು ಯಾವುದೇ ಅನುಕಂಪ ತೋರಿಸುವುದು ಬೇಡ. ಅವರೂ ಅಭ್ಯರ್ಥಿ ಹಾಕಲಿ, ನಾವು ನಮ್ಮ ನಾಯಕರು ಹೋರಾಟ ಮಾಡಿ ನವೀನ್ ಅವರನ್ನು ಗೆಲ್ಲಿಸುತ್ತೇವೆ ಎಂದು ಸವಾಲು ಹಾಕಿದರು.
ರಾಜ್ ಕುಮಾರ್ ನಗರದಲ್ಲಿ ಹಕ್ಕುಪತ್ರವನ್ನು ಎಲ್ಲರಿಗೂ ಕೊಟ್ಟಿಲ್ಲ, ಆ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಅವರನ್ನು ಸಹ ಕರೆದಿರಲಿಲ್ಲ. ಆದರೆ ತಮ್ಮ ಕ್ಷೇತ್ರದ ಕಾರ್ಯಕ್ರಮ ಎಂಬ ಕಾರಣಕ್ಕೆ ಪ್ರಶಾಂತ್ ಅವರೇ ಹೋಗಿದ್ದರು ಎಂದು ಸ್ಪಷ್ಟನೆ ನೀಡಿದರು.
ಉಪ ಚುನಾವಣೆಯಲ್ಲಿ ಅನುಕಂಪ ಕೆಲಸ ಮಾಡಲಿದೆ. ಬಿಜೆಪಿಯವರಿಗೆ ಅಭ್ಯರ್ಥಿ ಇಲ್ಲ, ಹಾಗಾಗಿ ಈ ರೀತಿ ಹೇಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಮಹೇಶ್, ಗಿರೀಶ್ ಮತ್ತಿತರರು ಇದ್ದರು.
ಗೊಂದಲ ಇಲ್ಲ:
‘‘ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ಸಂಬಂಧ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಭವಾನಿ ಮೇಡಂ ಮತ್ತು ನನ್ನದು ತಾಯಿ ಮಗನ ಸಂಬಂಧ. ಯಾರಿಗೇ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇನೆ. ನಾನು ಪಕ್ಷೇತರವಾಗಿ ನಿಲ್ಲುವ ಅಥವಾ ಬೇರೆ ಪಕ್ಷಕ್ಕೆ ಹೋಗುವ ಯಾವುದೇ ಅಡ್ಡದಾರಿ ರಾಜಕೀಯ ಮಾಡುವುದಿಲ್ಲ.’
-ಎಚ್.ಎಸ್. ಸ್ವರೂಪ್ ಪ್ರಕಾಶ್, ಜಿಪಂ ಮಾಜಿ ಉಪಾಧ್ಯಕ್ಷ.