ಕೆ.ಆರ್.ಪೇಟೆ: ತಾಲೂಕಿನ ಮತದಾರರ ತೀರ್ಪನ್ನು ಒಪ್ಪಿಕೊಂಡಿದ್ದೇನೆ. ವಿರೋಧ ಪಕ್ಷಗಳ ನಾಯಕರು ನನ್ನ ವಿರುದ್ಧ ಅಪಪ್ರಚಾರ ನಡೆಸಿದಂತೆ ಸೋಲಿಗೆ ಹೆದರಿ ಕ್ಷೇತ್ರದಿಂದ ಓಡಿಹೋಗುವವನಲ್ಲ, ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಿ ಕ್ಷೇತ್ರದಲ್ಲಿದ್ದುಕೊಂಡು ಜನತೆಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ಡಾ.ನಾರಾಯಣಗೌಡ ಹೇಳಿದರು.
ರಾಜ್ಯದಲ್ಲಿ ಬೀಸಿರುವ ಕಾಂಗ್ರೆಸ್ ಅಲೆಗೆ ಹಲವರಿಗೆ ಸೋಲಾಗಿದೆ. ಜನತೆ ಕಾಂಗ್ರೆಸ್‌ಗೆ ತೀರ್ಪು ನೀಡಿದ್ದಾರೆ. ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ 2 ಸಾವಿರ ಕೋಟಿ ರೂ. ಅನುದಾನ ತಂದು ಹಿಂದೆಂದೂ ನಡೆಯದಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದರೂ ನನ್ನನ್ನು ತಿರಸ್ಕರಿಸಿದ್ದಾರೆ. ನಾನು ಮಾಡಿರುವ ತಪ್ಪಾದರೂ ಏನು?, ಎಲ್ಲಿ ದುಡುಕಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸತತವಾಗಿ ಮೂರು ಅವಧಿಗೆ ಶಾಸಕನಾಗಿ ಕೆಲಸ ಮಾಡಿರುವ ನಾನು ಸೋಲು, ಗೆಲುವು ಎರಡನ್ನೂ ಕಂಡಿದ್ದೇನೆ. ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಪ್ರಭಲವಾದ 6 ಖಾತೆಗಳಿಗೆ ಸಚಿವನಾಗಿ ಸಮರ್ಥವಾಗಿ ಕೆಲಸ ಮಾಡಿದ್ದೇನೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ಹೈಟೆಕ್ ಒಳಾಂಗಣ ಕ್ರೀಡಾಂಗಣ, ತಾಯಿ-ಮಗು ಆಸ್ಪತ್ರೆ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯನ್ನು ಅನುಷ್ಠಾನ, ಬರಪೀಡಿತ ಸಂತೇಬಾಚಹಳ್ಳಿ ಹೋಬಳಿ, ಶೀಳನೆರೆ, ಬೂಕನಕೆರೆ ಹಾಗೂ ಅಕ್ಕಿಹೆಬ್ಬಾಳು ಹೋಬಳಿಯ ಕೆರೆ-ಕಟ್ಟೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿದ್ದೇನೆ. ದೇವಾಲಯಗಳು ಹಾಗೂ ರಸ್ತೆಗಳ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ವಿಶೇಷ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಶಿಕ್ಷಣ, ವಿದ್ಯುತ್, ನೀರಾವರಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದರೂ ಜನತೆ ಆಶೀರ್ವದಿಸಲಿಲ್ಲ. ನನ್ನ ಅವಧಿಯ ಅಭಿವೃದ್ಧಿ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಲು ನಾನು ಬಿಡಲ್ಲ ಎಂದು ಹೇಳಿದರು.
ಮಹಾರಾಷ್ಟ್ರ ಒಕ್ಕಲಿಗರ ಸಂಘದ ಅಧ್ಯಕ್ಷ ಜೀತೇಂದ್ರಗೌಡ, ಉದ್ಯಮಿ ಸ್ವಾಭಿಮಾನಿ ನಾಗರಾಜಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಜವರಾಯಿಗೌಡ, ಪುರಸಭೆ ಸದಸ್ಯ ಬಸ್ ಸಂತೋಷ್‌ಕುಮಾರ್, ಎಚ್.ಆರ್.ಲೋಕೇಶ್, ಕೆ.ವಿನೋದ್‌ಕುಮಾರ್, ದೊದ್ದನಕಟ್ಟೆ ಪಾಂಡು, ಬೂಕನಕೆರೆ ವೆಂಕಟೇಶ್, ಮೋದೂರು ಮಂಜು ಮತ್ತಿತರರು ಉಪಸ್ಥಿತರಿದ್ದರು.