ಚಾಮರಾಜನಗರ: ಜಿಲ್ಲೆಯಲ್ಲಿ 4 ಲ್ಯಾಂಪ್ಸ್ ಸೊಸೈಟಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಸೋಲಿಗರೆ ವಿವಿಧ ಬಗೆಯ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಾರೆ. ಚಾ.ನಗರ ಮತ್ತು ಹನೂರು ಲ್ಯಾಂಪ್ಸ್ ಸೊಸೈಟಿಯಲ್ಲಿ ನಿವೃತ್ತ ನೌಕರರು ಕೆಲಸ ಮಾಡುತ್ತಿದ್ದಾರೆ. ಸೋಲಿಗ ಸಮುದಾಯದಲ್ಲೇ ಇತ್ತೀಚೆಗೆ ಪ್ರತಿಭಾವಂತ ವಿದ್ಯಾರ್ಥಿಗಳು ಓದು ಮುಗಿಸಿಕೊಂಡು ಉದ್ಯೋಗಕ್ಕಾಗಿ ಹುಡುಕುತ್ತಿದ್ದಾರೆ. ಅಂತವರಿಗೆ ಲ್ಯಾಂಪ್ಸ್ ಸೊಸೈಟಿಯಲ್ಲಿ ಉದ್ಯೋಗ ಅವಕಾಶ ನೀಡಬೇಕು ಎಂದು ಸೋಲಿಗರ ಮುಖಂಡ ಸಿ.ಮಾದೇಗೌಡ ಒತ್ತಾಯಿಸಿದರು.
2059 ಸೋಲಿಗ ರೈತರಿಗೆ ಪಿಎಂ ಕಿಸಾನ್ ಯೋಜನೆ ಸವಲತ್ತು ನೀಡಬೇಕು ಎಂದು ಆಗ್ರಹಿಸಿದರು. ಮತ್ತೊಬ್ಬ ಮುಖಂಡ ಮಾತನಾಡಿ, ಗುಂಡ್ಲುಪೇಟೆ 12 ಹಾಡಿಗಳಲ್ಲಿ ವಾಸವಾಗಿರುವ ಕೆಲವು ಜೇನು ಕುರುಬರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇಲ್ಲದೇ ಜಾತಿಪ್ರಮಾಣ ಪತ್ರ ಮಾಡಿಸಲು ಸಮಸ್ಯೆಯಾಗುತ್ತಿದೆ ಎಂದರು. ಗುಂಡ್ಲುಪೇಟೆ ರತ್ನಮ್ಮಮಾತನಾಡಿ, ಕೇರಳದಲ್ಲಿ ಈರ್ವ ಸೋಲಿಗ ಮಹಿಳೆ ಜೀತಕ್ಕೆ ಸಿಲುಕಿ, ತಪ್ಪಿಸಿಕೊಂಡು ಬಂದಿದ್ದಾರೆ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು. ಕೆಲವು ಕಾಲೋನಿಗಳಲ್ಲಿ ಜಲಜೀವನ್ ಮಿಷನ್ ನೀರು ಕುಡಿದು ಹಲವರು ಆರೋಗ್ಯ ಸಮಸ್ಯೆಯಾಗುತ್ತಿದೆ ಎಂದು ದೂರಿದರು.
ವೆಂಕಟನಾಯಕ್ ವಿರುದ್ಧ ಆರೋಪ:
ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ವೆಂಕಟನಾಯಕ್ ವಿರುದ್ಧ ಸಮುದಾಯದ ಮುಖಂಡರು ಅವ್ಯವಹಾರದ ಆರೋಪ ಮಾಡಿದರು. 2016-17 ರ ನೇ ಸಾಲಿನ ಸಾಮಗ್ರಿ ಖರೀದಿಯಲ್ಲಿ ಅಕ್ರಮ ನಡೆದಿದೆ. 150 ರೂ. ಬೆಲೆಯ ಛೇರ್‌ಗಳಿಗೆ 500 ರೂ. ಬಿಲ್‌ಮಾಡಿದ್ದಾರೆ. ಇನ್ನಿತರೆ ಯೋಜನೆಗಳಲ್ಲಿ 20-30 ಲಕ್ಷ ರೂ. ಹಣವನ್ನು ವಂಚನೆ ಮಾಡಿದ್ದಾರೆ. ಮನೆ ನಿರ್ಮಾಣ ಹಾಗೂ ಇನ್ನಿತರೆ ಕೆಲಸಗಳಿಗೆ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಾರೆ. ಅವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಹಲವು ಸಮಸ್ಯೆಗಳ ಅನಾವರಣ:
ಗುಂಡ್ಲುಪೇಟೆ ಮಲ್ಲೇಶ್ ಮಾತನಾಡಿ, ಮಂಚಹಳ್ಳಿ ಗ್ರಾಮದಲ್ಲಿ ನಾಯಕ ಸಮುದಾಯದ ಸ್ಮಶಾನವನ್ನು ಬೇರೆ ಜನಾಂಗದವರು ಒತ್ತುವರಿ ಮಾಡಿಕೊಂಡಿದ್ದು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವಾಲ್ಮೀಕಿ ಭವನದ ಅಭಿವೃದ್ಧಿಗೂ ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಂಗಸ್ವಾಮಿ ನಾಯಕ ಮಾತನಾಡಿ, ಹರದನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ಸೋರುತ್ತಿದ್ದು, ಕುಸಿಯುವ ಹಂತದಲ್ಲಿದೆ. ಈ ಕುರಿತು ಕ್ರಮವಹಿಸಿಲ್ಲ ಎಂದು ದೂರಿದರು. ಹನೂರು ಕೌದಳ್ಳಿ ಗ್ರಾಮದಲ್ಲಿ ನಾಯಕರು ಬೀದಿಗೆ ಮೂಲಸೌಕರ್ಯ ಇಲ್ಲದಂತಾಗಿದೆ ಎಂದು ಶಿವಣ್ಣ ಎಂಬುವವರು ದೂರಿದರು.
ಧ್ವನಿಸಿದ ವಿಜಯವಾಣಿ ವರದಿ:
ಮುಖಂಡ ಅಗರ ರಾಜು ಮತ್ತು ಜಿ.ಬಂಗಾರು ಮಾತನಾಡಿ, ಅ.23 ರಂದು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ, ವಾಸ್ತವ್ಯ ಮಾಡಿ, ವಾಸ್ತವ ನೋಡಿ ವಿಶೇಷ ವರದಿಯನ್ನು ಉಲ್ಲೇಖಿಸಿ ಬೆಲವತ್ತ, ಮೊಮ್ಮನಂಜನಪೋಡು ಗ್ರಾಮಗಳಲ್ಲಿ ವಾಸಿಸುತ್ತಿರುವ ಸೋಲಿಗ ಕುಟುಂಬಗಳಿಗೆ ಇಂದಿಗೂ ಯಾಕೇ ಮನೆಗಳನ್ನು ನಿರ್ಮಿಸಿಲ್ಲ ಎಂದು ಪ್ರಶ್ನಿಸಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬಿಂದ್ಯಾ ಪ್ರತಿಕ್ರಿಯಿಸಿ, ಅಲ್ಲಿ ವಾಸಿಸುತ್ತಿರುವ ಜೇನು ಕುರುಬರಿಗೆ ವಿಶೇಷ ಮನೆಗಳನ್ನು ಕೊಡಲು ಅವಕಾಶವಿಲ್ಲ. ಅವರಿಗೆ ಗ್ರಾ.ಪಂ ಮೂಲಕ ಮನೆಗಳನ್ನು ನೀಡಬೇಕಾಗಿದೆ. ಅವರಿಗೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ರಮವಹಿಸಲಾಗುವುದು ಎಂದರು.