ಜಿಲ್ಲೆ

ಸೋಲಾರ್​ ಕೇಬಲ್​ ಕದ್ದ ಮೂವರ ಬಂಧನ

ಪಾವಗಡ: ತಾಲೂಕಿನ ವಿವಿಧ ಕಡೆಗಳಲ್ಲಿರುವ ಸೋಲಾರ್​ ವಿದ್ಯುತ್​ ಉತ್ಪಾದನಾ ಘಟಕಗಳಲ್ಲಿ ಪ್ಯಾನಲ್​ಗಳಿಗೆ ಅಳವಡಿಸುವ ಕೇಬಲ್​ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಪಾವಗಡ ಪಟ್ಟಣದ ವಾಸಿಗಳಾದ ಮಲ್ಲೇಶ (28) ಬಾಬು(33) ಮಂಜ(28) ಬಂಧಿತರು. 2025 ಜನವರಿ 20ರಂದು ವಳ್ಳೂರು ಗ್ರಾಮದ ಬಳಿಯಿರುವ ಅವಾದ ಸೋಲಾರ್​ ಘಟಕದಲ್ಲಿ 1.30 ಲಕ್ಷ ಮೌಲ್ಯದ 2,500 ಮೀಟರ್​ ಉದ್ದದ ಕೇಬಲ್​ ಕಳ್ಳತನವಾಗಿತ್ತು.

ಈ ಬಗ್ಗೆ ತಿರುಮಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮಧುಗಿರಿ ಡಿ.ವೈ.ಎಸ್​.ಪಿ ಮಂಜುನಾಥ ಮಾರ್ಗದರ್ಶನದಲ್ಲಿ ಸಿಪಿಐ ಗಿರೀಶ್​ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ 1900 ಮೀಟರ್​ ಕೇಬಲ್​, 2 ಟಿವಿಎಸ್​ ಎಕ್ಸೆಲ್​ ವಾಹನ ಮತ್ತು ಒಂದು ಕೇಬಲ್​ ಕಟ್ಟರ್​ ವಶಪಡಿಸಿಕೊಂಡಿದ್ದಾರೆ. ಇನ್ನೊಬ್ಬ ನಾಗರಾಜು (ನಾಗ)ಎಂಬ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಕಾರ್ಯಾಚರಣೆಯಲ್ಲಿ ಪಾವಗಡ ಗ್ರಾಮಾಂತರ ವೃತ್ತದ ಸಿಪಿಐ ಬಿ.ಸಿ.ಗಿರೀಶ್​, ತಿರುಮಣಿ ಪೊಲೀಸ್​ ಠಾಣೆ ಪಿಎಸ್​ಐ ಲಕ್ಷ್ಮಣ್​, ವೈ.ಎನ್​.ಹೊಸಕೋಟೆ ಪೊಲೀಸ್​ ಠಾಣೆ ಪಿಎಸ್​ಐ ಮಾಳಪ್ಪ ನಾಯ್ಯೋಡಿ ಹಾಗೂ ಸಿಬ್ಬಂದಿ ಎ.ಎಸ್​.ಐ. ಗೋವಿಂದರಾಜು,ಸೋಮಶೇಖರ್​, ಶ್ರೀಕಾಂತ್​ನಾಯ್ಕ ಇದ್ದರು.