ಜಿಲ್ಲೆ

ಸೋಲಾರ್ ಉಪಕರಣ ಫ್ಯಾಕ್ಟರಿ ಸ್ಥಾಪನೆಗೆ ಯತ್ನ

Kalaburagi

ಕಲಬುರಗಿ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿರ್ದೇಶಕ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಸಲ ಶನಿವಾರ ನಗರಕ್ಕೆ ಆಗಮಿಸಿದ ಯೂತ್ ಐಕಾನ್ ಚಂದು ಬಿ.ಪಾಟೀಲ್ ಅವರಿಗಾಗಿ ಬೃಹತ್ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕರ್ತರು, ಉತ್ತರ ಕ್ಷೇತ್ರದ ಜನರು, ಹಿತೈಷಿಗಳು, ಅಭಿಮಾನಿಗಳು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.
ನೆಹರು ಗಂಜ್ ಎಸ್.ಬಿ. ಪಾಟೀಲ್ ದಾಲ್ಮಿಲ್ ಆವರಣದಲ್ಲಿ ಬಿಜೆಪಿ ನಗರ ಮಹಾನಗರ ಜಿಲ್ಲಾ ಮತ್ತು ಉತ್ತರ ಮಂಡಲ ಘಟಕ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಬೃಹದಾಕಾರದ ಮಾಲೆ ಹಾಕಿ ರಾಮ, ಸೀತಾ, ಲಕ್ಷ್ಮಣ ಮತ್ತು ಆಂಜನೇಯ ದೇವರ ವಿಗ್ರಹ ನೀಡಿ ಚಂದು ಪಾಟೀಲ್ ಅವರನ್ನು ಗೌರವಿಸಲಾಯಿತು. ನಂತರ ಅಪಾರ ಜನರು ಸನ್ಮಾನಿಸಿ ಅಭಿಮಾನ ಮೆರೆದರು.
ಸನ್ಮಾನ ಸ್ವೀಕರಿಸಿದ ಚಂದ್ರಕಾಂತ (ಚಂದು) ಪಾಟೀಲ್ ಮಾತನಾಡಿ, ಸೋಲಾರ್ ವಿದ್ಯುತ್ ಪಾರ್ಕ , ಗಾಳಿ ವಿದ್ಯುತ್ ಘಟಕಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಕಲಬುರಗಿ ಭಾಗದಲ್ಲಿ ಸೋಲಾರ್ ಉಪಕರಣ ತಯಾರಿಕೆ ಕಾರ್ಖಾನೆ ಸ್ಥಾಪಿಸಲು ಶ್ರಮಿಸುವುದಾಗಿ ಘೋಷಿಸಿದರು.
ನಮ್ಮ ಭಾಗದಲ್ಲಿ ಬಿಸಿಲು ಹೆಚ್ಚಿರುವುದರ ಜತೆಗೆ ಇರುವ ಒಣಭೂಮಿಯ ಬಳಸಿಕೊಳ್ಳಲು ಕಾರ್ಯಯೋಜನೆ ಹಾಕಿಕೊಳ್ಳಲಾಗುವುದು. ರೂಫ್ ಟಾಪ್ ಸೋಲಾರ್ ವಿದ್ಯುತ್ ಘಟಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪಿಸಲು ಪ್ರೋತ್ಸಾಹಿಸ ಲಾಗುವುದು. ನಿಗಮದಿಂದ 6000 ಸೋಲಾರ್ ಪಂಪ್ಸೆಟ್ ಮಂಜೂರಾಗಲಿದ್ದು, ಅದರಲ್ಲಿ ಹೆಚ್ಚಿನ ಪಂಪ್ಸೆಟ್ಗಳನ್ನು ಕಲಬುರಗಿ ರೈತರಿಗೆ ಕೊಡಿಸಿಕೊಡಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ರಾಜ್ಯಮಟ್ಟದ ಮಂಡಳಿ ಅಧ್ಯಕ್ಷರನ್ನಾಗಿಸುವ ಮೂಲಕ ಮಹತ್ವದ ಹೊಣೆಗಾರಿಕೆ ನೀಡಿರುವ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು. ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಈ ಭಾಗಕ್ಕೆ ಸಾಧ್ಯವಾದಷ್ಟು ಅನುವು ಮಾಡಿಕೊಡಲು ಶ್ರಮಿಸುತ್ತೇನೆ ಎಂದರು. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು.

ಸಾಕ್ಷಿಯಾದ ಗಣ್ಯಾತಿಗಣ್ಯರು
ಶ್ರೀಶೈಲ ಸಾರಂಗಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಮಾಜಿ ಶಾಸಕ ಅಮರನಾಥ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್, ವಕ್ಫ್ ಬೋಡರ್್ ಅಧ್ಯಕ್ಷ ಖಾಜಾ ಪಟೇಲ್, ಪ್ರಮುಖರಾದ ಶರಣಬಸಪ್ಪ ಕಾಡಾದಿ, ಧರ್ಮಪ್ರಕಾಶ ಪಾಟೀಲ್, ಅಶೋಕ ಮಾನಕರ್, ವಿಜಯಕುಮಾರ ಹುಲಿ, ಡಾ.ಕೈಲಾಶ ಬಿ.ಪಾಟೀಲ್, ಉಮೇಶ ಪಾಟೀಲ್, ಶಿವಾನಂದ ಪಾಟೀಲ್ ಅಷ್ಟಗಿ, ಪ್ರಫುಲ್ ನಮೋಶಿ, ಚನ್ನವೀರ ಲಿಂಗನವಾಡಿ, ಶಿವಾನಂದ ಪಿಸ್ತಿ, ಚನ್ನಪ್ಪ ಡಿಗ್ಗಾವಿ, ನಾಗರಾಜ ಕಿಣಗಿ, ಸಂತೋಷ ರಾಂಪುರ, ಗುರುಸ್ವಾಮಿ, ಅನಿಲ್ ಜಾಧವ್, ಸುಭಾಷ ನಾಯಕ, ಸಿದ್ದು ಸಂಗೋಳಗಿ, ವರದಾಶಂಕರ ಶೆಟ್ಟಿ, ಸಾಹೇಬಗೌಡ ಪಾಟೀಲ್, ರಮೇಶ ತಾಂಡೂರ, ಮಂಜುನಾಥ ಕಳಸ್ಕರ್, ಅರುಣ ಕುಲಕಣರ್ಿ, ಕೃಷ್ಣಕುಮಾರ ಜಾಧವ್, ವಿಜಯ ಮಡಿವಾಳ, ಮಲ್ಲಿಕಾಜರ್ುನ ಪಾಟೀಲ್ ಓಕಳಿ, ಸೂರಜ್ ತಿವಾರಿ, ವಿಜಯಲಕ್ಷ್ಮೀ ಗೊಬ್ಬೂರ, ಶಿವರಾಜ ಅಂಗಡಿ, ವಿನೋದಕುಮಾರ ಜನೇವರಿ, ಆನಂದ ಕಪನೂರ ಮೊದಲಾದವರು ಪಾಲ್ಗೊಂಡಿದ್ದರು.

ಮುಂದಿನ ಸಲ ಎಂಎಲ್ಎ ಪಕ್ಕಾ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಚಂದು ಪಾಟೀಲ್ ಸೋತಿರಬಹುದು. ಮುಂದಿನ ಸಲ ಶಾಸಕರಾಗುವುದು ಆಗೋದು ಗ್ಯಾರಂಟಿ ಎಂದು ಸುಲಫಲ ಮಠದ ಶ್ರೀ ಮಹಾಂತ ಶಿವಾಚಾರ್ಯರು ಆಶೀರ್ವದಿಸಿ ಭವಿಷ್ಯ ನುಡಿದರು. ಕಲಬುರಗಿ ಉತ್ತರ ಕ್ಷೇತ್ರದ ಜನರು ಈ ಸಲ ಖಂಡಿತವಾಗಿ ಆಶೀವರ್ಾದ ಮಾಡುವ ಮೂಲಕ ಗೆಲ್ಲಿಸುತ್ತಾರೆ. ಚಂದು ಜನರ ನೋವಿಗೆ ಧ್ವನಿ ಆಗುತ್ತಿದ್ದಾರೆ. ಈ ಭಾಗದಲ್ಲಿ ಕೈಗಾರಿಕೆ ಕ್ರಾಂತಿ ಮಾಡಿದ್ದು ಎಸ್.ಬಿ.ಪಾಟೀಲ್ ಗ್ರೂಪ್. ಈ ಕುಟುಂಬದ ಬಗ್ಗೆ ಜನರಿಗೆ ಅತಿಯಾದ ಪ್ರೀತಿಯಿದೆ. ಹಣ-ಗುಣ ಎರಡೂ ಇರುವುದರಿಂದ ಒಳ್ಳೆಯದೇ ಆಗಲಿದೆ. ಬಿ.ಜಿ.ಪಾಟೀಲ್ ಅವರಲ್ಲಿರುವ ನಯ, ವಿನಯ, ಶ್ರದ್ಧೆ, ನಿಷ್ಠೆ, ಜನಪರ ಕಾಳಜಿ, ನೊಂದವರ ಬಗ್ಗೆ ಇರುವ ಕಕ್ಕುಲತೆಗಳೇ ನನ್ನನ್ನು ಇಂದು ಇಲ್ಲಿಗೆ ಕರೆ ತಂದಿವೆ ಎಂದು ಪೂಜ್ಯರು ಹೇಳಿದರು.

ಕ್ರೆಡಲ್ ಪ್ರಾದೇಶಿಕ ಕಚೇರಿ ಮರಳಿ ತನ್ನಿ
ತಾವು ಎಚ್ಕೆಆರ್ಡಿಬಿ ಅಧ್ಯಕ್ಷರಾಗಿದ್ದಾಗ ಕನರ್ಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ (ಕ್ರೆಡಲ್) ಪ್ರಾದೇಶಿಕ ಕಚೇರಿ ಕಲಬುರಗಿಯಲ್ಲಿ ಆರಂಭಿಸಲಾಗಿತ್ತು. ಅದಕ್ಕೆ ಕೆಕೆಆರ್ಡಿಬಿಯಲ್ಲೇ ಸ್ಥಳ ನೀಡಲಾಗಿತ್ತು. ಈಗದು ಧಾರವಾಡಕ್ಕೆ ಸ್ಥಳಾಂತರಗೊಂಡಿದೆ. ಹೀಗಾಗಿ ಅದನ್ನು ಮರಳಿ ಕಲಬುರಗಿಗೆ ತರುವ ಮೂಲಕ ಜನರಿಗೆ ಅನುವು ಮಾಡಿಕೊಡಬೇಕು ಎಂದು ಮಾಜಿ ಶಾಸಕ ಅಮರನಾಥ ಪಾಟೀಲ್ ಮಹಾಗಾಂವ್ ಸಲಹೆ ನೀಡಿದರು. ಕಲಬುರಗಿ ಜಿಲ್ಲೆಯನ್ನು ಕೈಗಾರಿಕಾ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದ್ದೇ ಎಸ್.ಬಿ.ಪಾಟೀಲ್ ಗ್ರೂಪ್. ಕೈಗಾರಿಕೆ ಕ್ರಾಂತಿಗೆ ಮನೆತನದ ಕೊಡುಗೆ ಮಹತ್ವದಾಗಿದೆ. ಚಂದು ಪಾಟೀಲ್ ರಾಜ್ಯ ಮಟ್ಟದ ನಿಗಮದ ಅಧ್ಯಕ್ಷರಾಗಿರುವ ಈ ಸಂತೋಷ ಘಳಿಗೆಯಲ್ಲಿ ಗಳಂಗಳಪ್ಪ ಪಾಟೀಲ್, ಎ.ಜಿ.ಪಾಟೀಲ್ ಮತ್ತು ಅಮಿತ್ ಪಾಟೀಲ್ ಅವರಿದ್ದರೆ ಖುಷಿಪಡುತ್ತಿದ್ದರು ಎಂದರು.

ಉತ್ತರದಲ್ಲಿ ಬಿಜೆಪಿ ಝಂಡಾ ಹಾರಿಸೋದೇ ಗುರಿ
ಕಲಬುರಗಿ ಉತ್ತರ ಕ್ಷೇತ್ರ ಗೆಲ್ಲುವುದು ಬಿಜೆಪಿ ಗುರಿ. ಇದಕ್ಕೆ ಸಹಕಾರ ನೀಡುವ ಮೂಲಕ ಪಕ್ಷದ ನಾಯಕರೆಲ್ಲರು ನನ್ನ ಪುತ್ರ ಚಂದು ಪಾಟೀಲ್ ಅವರಿಗೆ ಮಹತ್ವದ ಹೊಣೆ ವಹಿಸಿಕೊಟ್ಟಿರುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡಲು ಶಕ್ತಿ ಬಂದಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಹೇಳಿದರು. ಚಂದು ಪಾಟೀಲ್ ಎಲ್ಲರ ಮನಸ್ಸು ಗೆದ್ದಿದ್ದಾರೆ. ಜನರು ಸಹ ಬೆಂಬಲಿಸುತ್ತಿದ್ದಾರೆ. ನಿಮ್ಮೆಲ್ಲರ ನಂಬಿಕೆ, ವಿಶ್ವಾಸಕ್ಕೆ ಋಣಿಯಾಗಿ ಕೆಲಸ ಮಾಡುತ್ತೇವೆ. ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ಸೋತಿದ್ದಾರೆ. ಮುಂದಿನ ಸಲ ಎಲ್ಲರೂ ಬೆಂಬಲಿಸುವ ಮೂಲಕ ಉತ್ತರ ಕ್ಷೇತ್ರದಲ್ಲಿ ಚಂದು ಪಾಟೀಲ್ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಝಂಡಾ ಹಾರಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.