ಜಿಲ್ಲೆ

ಸೋರುತಿಹುದು ಜೂನಿಯರ್​ ಕಾಲೇಜು ಮಾಳಿಗೆ : ಮೈಸೂರು ಮಹಾರಾಜರು ಶಂಕುಸ್ಥಾಪನೆ ನೆರವೇರಿಸಿದ್ದ ಕಾಲೇಜು, ಪಾರಂಪರಿಕ ಕಟ್ಟಡ ಸಂರಕ್ಷಣೆಗೆ ಗ್ರಹಣ

ಜಗನ್ನಾಥ್​ ಕಾಳೇನಹಳ್ಳಿ ತುಮಕೂರು

ಹೆಸರಾಂತ ವಿಜ್ಞಾನಿಗಳು, ಕವಿಗಳು, ಸಾಹಿತಿಗಳು, ರಾಜಕಾರಣಿಗಳನ್ನು ಸಮಾಜಕ್ಕೆ ಕೊಡುಗೆ ನೀಡಿರುವ ಮೈಸೂರು ಮಹಾರಾಜರು ನಿರ್ಮಿಸಿದ್ದ ತುಮಕೂರಿನ ಶತಮಾನದ ಸರ್ಕಾರಿ ಜೂನಿಯರ್​ ಕಾಲೇಜು ಮಾಳಿಗೆ ಸೋರುತಿದ್ದು, ಈ ಪಾರಂಪರಿಕ ಕಟ್ಟಡದ ಸಂರಕ್ಷಣೆಗೆ ಕ್ರಮವಹಿಸದೇ ರ್ನಿಲಕ್ಷ ತಾಳಿರುವುದು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿದೆ.

ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರು 1900ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದ ನಗರದ ಬಿ.ಎಚ್​.ರಸ್ತೆಯ ಸರ್ಕಾರಿ ಪ್ರೌಢಶಾಲೆ ಕಟ್ಟಡಕ್ಕೆ ಈಗ 122 ವರ್ಷಗಳ ಇತಿಹಾಸ. ಶತಮಾನದ ಈ ಕಟ್ಟಡವು ನಿರ್ವಹಣೆಯಿಲ್ಲದೆ ಶಿಥಿಲಗೊಂಡಿದೆ. ಇದರ ಪರಿಣಾಮ ಪ್ರಾಚಾರ್ಯರ, ಬೋಧಕ ಸಿಬ್ಬಂದಿ ಕೊಠಡಿ, ಪ್ರಯೋಗಾಲಯ ಕೊಠಡಿಗಳು, ಕಂಪ್ಯೂಟರ್​ ಲ್ಯಾಬ್​ ಹೊಂದಿರುವ ಹಳೆಯ ಬ್ಲಾಕ್​ ಮಳೆ ಬಂದಾಗ ಸೋರುತಿದ್ದು ಮಕ್ಕಳ ಕಲಿಕೆಗೆ ತೀವ್ರ ತೊಂದರೆ ಆಗಿದೆ.

1800 ಮಕ್ಕಳ ಕಲಿಕಾ ತಾಣ: ಕಳೆದ ಸಾಲಿನಲ್ಲಿ ಪ್ರಥಮ ಹಾಗೂ ದ್ವೀತಿಯ ಪಿಯುಸಿ ಸೇರಿ ಒಟ್ಟು 1800 ಮಕ್ಕಳು ಜೂನಿಯರ್​ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿಜ್ಞಾನ, ವಾಣಿಜ್ಯ, ಕಲೆ ವಿಭಾಗಗಳನ್ನು ಒಳಗೊಂಡಿದೆ. ಈ ಕಾಲೇಜಿನ ಕಂಪ್ಯೂಟರ್​, ರಸಾಯನಶಾಸ, ಭೌತಶಾಸ, ಜೀವಶಾಸ ಪ್ರಯೋಗಾಲಯಗಳು ಇರುವ 122 ವರ್ಷಗಳ ಹಳೆಯ ಕಟ್ಟಡವು ಭಾಗಶ@ ಶಿಥಿಲಗೊಂಡಿದೆ. ಛಾವಣಿ ಬಹುತೇಕ ಹಾಳಾಗಿದ್ದು ಮಕ್ಕಳು, ಉಪನ್ಯಾಸಕರು ಆತಂಕದಲ್ಲಿ ದಿನ ದೂಡುವಂತಾಗಿದೆ.

ಜಿಲ್ಲಾ ಕೇಂದ್ರ ತುಮಕೂರಿನಲ್ಲಿ ಶತಮಾನಗಳ ಶಾಲಾ&ಕಾಲೇಜು ಸೇರಿದಂತೆ ಹೆರಿಟೇಜ್​ ಕಟ್ಟಡಗಳ ಸಂರಕ್ಷಣೆಗೆ ಸ್ಮಾರ್ಟ್​ಸಿಟಿ ಯೋಜನೆ ಅಡಿ ಒತ್ತು ಕೊಡಲಾಗಿತ್ತು. ನಗರದ ಮಧ್ಯಭಾಗದಲ್ಲಿರುವ ಸರ್ಕಾರಿ ಜೂನಿಯರ್​ ಕಾಲೇಜು ಸಂರಕ್ಷಣೆಗೆ ಆದ್ಯತೆ ಕೊಡಬೇಕೆಂಬುದು ಸಾರ್ವಜನಿಕರ, ಪಾಲಕರ ಆಗ್ರಹವಾಗಿದೆ.

ಖ್ಯಾತನಾಮರು ಓದಿದ್ದ ಶಾಲೆ !: ತುಮಕೂರು, ಚಿತ್ರದುರ್ಗ ಹಾಗೂ ಕೋಲಾರ ಸೇರಿ ಮೂರು ಜಿಲ್ಲೆಗಳಿಗೆ ಏಕೈಕ ಸರ್ಕಾರಿ ಪ್ರೌಢಶಾಲೆ ಇದಾಗಿದ್ದು, ಗ್ರಾಮೀಣ ಭಾಗದ ಶಿಕ್ಷಣ ದೇಗುಲವಾಗಿತ್ತು. 1968ರಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಇಲ್ಲಿ ಆರಂಭಿಸಲಾಯಿತು. ಯುಗದ ಸಂತ ಸಿದ್ಧಗಂಗೆಯ ಲಿಂಗೈಕ್ಯ ಶಿವಕುಮಾರ ಶ್ರೀಗಳು, ಖ್ಯಾತ ಸಾಹಿತಿ, ಕವಿ ಟಿ.ಪಿ.ಕೈಲಾಸಂ, ಪ್ರಸಿದ್ಧ ವಿಜ್ಞಾನಿ ರಾಜಾರಾಮಣ್ಣ, ಹಾಲಿ ಸಂಸದ ಜಿ.ಎಸ್​.ಬಸವರಾಜು, ಮಾಜಿ ಶಾಸಕರಾದ ರ್ಯಾಂಕ್​ ನಜೀರ್​, ಎಸ್​.ಷಫೀ ಅಹ್ಮದ್​, ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಓ.ಅನಂತರಾಮಯ್ಯ ಸೇರಿ ಖ್ಯಾತನಾಮರು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಈ ಐತಿಹಾಸಿಕ ಶಾಲೆ ಕಟ್ಟಡ ಉಳಿಸಿ ಮುಂದಿನ ಪೀಳಿಗೆಗೂ ಪರಿಚಯಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ.

ಕಂಪ್ಯೂಟರ್​, ವಾಣಿಜ್ಯ ಲೆಕ್ಚರರ್​ ಇಲ್ಲ: ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮೂರು ವಿಭಾಗಗಳಿದ್ದು, ಪಿಸಿಎಂಸಿಎಸ್​, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್​ ಶಿಕ್ಷಣ ಅತ್ಯಗತ್ಯವಾಗಿದೆ. ಕಂಪ್ಯೂಟರ್​ ಸೈನ್ಸ್​ ಉಪನ್ಯಾಸಕ ಮಂಜೂರಾದ ಹುದ್ದೆಯೇ ಇಲ್ಲ. ಇನ್ನು ಬ್ಯುಸಿನೆಸ್​ ಸ್ಟಡಿಸ್​, ಅಕೌಂಟೆನ್ಸಿ ವಿಷಯಗಳಿಗೂ ಕಾಯಂ ಉಪನ್ಯಾಸಕರಿಲ್ಲ. 14 ಉಪನ್ಯಾಸಕ ಹುದ್ದೆಗಳು ಖಾಲಿ ಇದ್ದು ಸದ್ಯ 33 ಬೋಧಕ ಸಿಬ್ಬಂದಿ ಇದ್ದಾರೆ. 14 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ.

ಸರ್ಕಾರಿ ಜೂನಿಯರ್​ ಕಾಲೇಜು ಕಟ್ಟಡ ಸಂರಕ್ಷಣೆಗೆ ಒತ್ತುಕೊಡಲಾಗುವುದು. ಈ ಪಾರಂಪರಿಕ ಕಟ್ಟಡ ಸಂರಕ್ಷಣೆಗೆ ಪುರಾತತ್ವ ಇಲಾಖೆ ನಿರ್ದೇಶನದಡಿ ಕ್ರಮವಹಿಸಬೇಕಿದೆ. ಸದ್ಯಕ್ಕೆ ಮಳೆ ನೀರು ಸೋರದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು. ಜಿ.ಬಿ.ಜ್ಯೋತಿಗಣೇಶ್​ ನಗರ ಶಾಸಕ ಈ ವರ್ಷ ಮೂಲಸೌಕರ್ಯಕ್ಕಿಂತ ಶೈಕ್ಷಣಿಕ ಗುಣಮಟ್ಟಕ್ಕೆ ಒತ್ತುಕೊಡಲಾಗುತ್ತಿದೆ. ಸರ್ಕಾರಿ ಜೂನಿಯರ್​ ಕಾಲೇಜು ನಿರ್ವಹಣೆಯಿಲ್ಲದೆ ಸೊರಗಿದೆ. ಈ ಹಿಂದೆ ಸಾಕಷ್ಟು ಅನುದಾನ ಕೊಡಲಾಗಿದೆ. ಬಿ.ಸಿ.ನಾಗೇಶ್​, ಶಿಕ್ಷಣ ಸಚಿವ