ಹಲಗೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬುಧವಾರ ಶಿವನ ದೇವಾಲಯಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಭಕ್ತರು ಬೆಳಗ್ಗೆಯಿಂದ ರಾತ್ರಿಯವರೆಗೆ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. ರಾತ್ರಿ ಶಿವನಾಮ ಸ್ಮರಿಸುತ್ತಾ ಜಾಗರಣೆ ಮಾಡಿದರು.
ಸಮೀಪದ ಕೊನ್ನಾಪುರ ಗ್ರಾಮದ ಶಂಭುಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಜಾಗರಣೆ ಪ್ರಯುಕ್ತ ದೇವಾಲಯದ ಆವರಣದಲ್ಲಿ ಹರಿಕಥೆ ನಡೆಯಿತು. ಹಲಗೂರಿನ ಭೀಮಾ ನದಿ ತೀರದಲ್ಲಿರುವ ಸೋಮೇಶ್ವರ ಮತ್ತು ಬೆನಮನಹಳ್ಳಿ ಅರ್ಕೇಶ್ವರ, ಬಸವನ ಬೆಟ್ಟದ ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನ ಸೇರಿದಂತೆ ಮುತ್ತತ್ತಿ ರಸ್ತೆಯಲ್ಲಿರುವ ವಿದ್ಯಾ ಗಣಪತಿ ದೇವಸ್ಥಾನ, ನಡುಕೇರಿ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮೂರ್ತಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಪೂಜೆ ನಡೆದವು.
ಸಮೀಪದ ಅಂತರವಳ್ಳಿ ಗ್ರಾಮದಲ್ಲಿನ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಹೋಮ, ಹವನ, ಸಿದ್ದೇಶ್ವರ ಸ್ವಾಮಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಬುಧವಾರ ರಾತ್ರಿ ಭಕ್ತರು ಬೆಟ್ಟದ ತಪ್ಪಲಿನಲ್ಲಿ ಕುಳಿತು ಶಿವಸ್ಮರಣೆ ಮಾಡಿದರು.
ಮಾರಗೌಡನಹಳ್ಳಿ ಗ್ರಾಮದ ನಾಗಲಿಂಗೇಶ್ವರ ಸ್ವಾಮಿ, ಹುಲ್ಲಾಗಾಲ ಮತ್ತು ಚನ್ನೀಪುರ ಗ್ರಾಮದ ಮಹದೇಶ್ವರ ಸ್ವಾಮಿ, ತೊರೆಕಾಡನಹಳ್ಳಿ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಸೋಮೇಶ್ವರ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ಪಾರ್ಚನೆ ನೆರವೇರಿದವು.