ಜಿಲ್ಲೆ

ಸೋಮೇಶ್ವರ ಪ್ರವಾಸೋದ್ಯಮ ಅಭಿವೃದ್ಧಿ ಸಭೆ

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಸೋಮೇಶ್ವರ ಶ್ರೀ ಸೋಮನಾಥನ ಸನ್ನಿಧಿಯಲ್ಲಿರುವ ಬೀಚ್‌ಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪ್ರಯುಕ್ತ ಸೋಮವಾರ ವಿನ್ಯಾಸಗಾರರು, ಆಸಕ್ತರು ಹಾಗೂ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸಂಯುಕ್ತ ಸಭೆ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ದೇವಸ್ಥಾನದ ಸನಿಹದಲ್ಲೇ ಬೀಚ್ ಇರುವುದರಿಂದ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಗ್ರಾಮೀಣ ಶೈಲಿಯ ಕರಕುಶಲದ ವಿನ್ಯಾಸವುಳ್ಳ ಆಕರ್ಷಕ ಕಾಟೇಜ್‌ಗಳು, ವ್ಯಾಪಾರಿ ಮಳಿಗೆಗಳು, ಮಕ್ಕಳ ಆಟದ ವ್ಯವಸ್ಥೆ, ಆಕರ್ಷಕ ಪ್ರತಿಮೆಗಳ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆ, ವ್ಯಾಪಾರಿ ಮಳಿಗೆಗಳು, ರೋಪ್ ವೇ ಮುಂತಾದ ವ್ಯವಸ್ಥೆ ಮಾಡಿದರೆ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಿದ್ದು, ಇದರಿಂದ ದೇವಸ್ಥಾನಕ್ಕೂ ಆದಾಯ ಬರುತ್ತದೆ ಎಂದು ದಿನೇಶ್ ನಡಾರ್ ತಿಳಿಸಿದರು.

ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಮಾತನಾಡಿ, ಸರ್ಕಾರದಿಂದ ಎರಡು ಕೋಟಿ ರೂ. ಹಣ ಬಂದರೂ ಹತ್ತು ವರ್ಷ ಬೀಚ್ ನಿರ್ವಹಣೆ ಮಾಡಿದ ಗುತ್ತಿಗೆ ವಹಿಸಿಕೊಂಡವರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಪ್ರಸ್ತುತ ಕಂಪನಿಯೊಂದು ಅಭಿವೃದ್ಧಿಗೆ ಮುಂದಾಗಿದೆ. ಇದರಿಂದ ದೇವಸ್ಥಾನ, ಸ್ಥಳೀಯರಿಗೆ ಯಾವುದೇ ಪ್ರಯೋಜನ ಇಲ್ಲ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ವತಿಯಿಂದಲೇ ಮಾಡಿದರೆ ಉತ್ತಮ ಎಂದರು.

ಬ್ರಹ್ಮಾವರದಿಂದ ತಲಪಾಡಿವರೆಗೆ ಇಂಥ ಸುಂದರ ಪ್ರದೇಶ ಎಲ್ಲೂ ಇಲ್ಲ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾದರೆ ದೇವಸ್ಥಾನಕ್ಕೂ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಕೋಟೆಪುರದಿಂದ ಬೋಳಾರವರೆಗೆ ಸೇತುವೆ ಆದ ಬಳಿಕ ಪ್ರದೇಶದ ಅಭಿವೃದ್ಧಿಗೆ ಇನ್ನಷ್ಟು ಬಲ ಬರಲಿದೆ ಎಂದು ದೀಪಕ್ ಪಿಲಾರ್ ತಿಳಿಸಿದರು.

ಪ್ರಕಾಶ್ ಮಾತನಾಡಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ ಅಧ್ಯಕ್ಷತೆ ವಹಿಸಿದ್ದರು. ವಕೀಲ ಬಿಪಿನ್ ರೈ, ದೇವಸ್ಥಾನದ ಟ್ರಸ್ಟಿಗಳಾದ ಭಾಸ್ಕರ ಗಟ್ಟಿ ಸೋಮೇಶ್ವರ, ಸದಾನಂದ ಬಂಗೇರ, ಸುಂದರ ಚೆಂಬುಗುಡ್ಡೆ, ಕಿಶೋರ್, ಸುಹಾಸಿನಿ ಬಬ್ಬುಕಟ್ಟೆ, ಉದ್ಯಮಿಗಳಾದ ಹರೀಶ್ ರಾವ್ ಮಡ್ಯಾರ್, ನಿಶಾಂತ್ ಶೆಟ್ಟಿ, ರಾಜೇಶ್ ಶೆಟ್ಟಿ, ಪ್ರವಾಸೋದ್ಯಮ ಆಸಕ್ತರಾದ ವಿಕ್ಕಿ ಪೂಜಾರಿ ವಾಡೂರು, ಜಿತಿನ್, ಹಿರಿಯರಾದ ರಾಮ್ ದಾಸ್, ರಾಜೇಶ್ ಶೆಟ್ಟಿ ಮಡ್ಯಾರ್, ಮೂಡದ ಪ್ರಕಾಶ್ ಮೊದಲಾದವರಿದ್ದರು.

ದೇವಸ್ಥಾನಕ್ಕೆ ಸಾಕಷ್ಟ್ರು ಭಕ್ತರು ಬರುವುದರಿಂದ ಧಾರ್ಮಿಕತೆಗೆ ಅಡ್ಡಿ ಬರದಂತೆ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ರುದ್ರಪಾದೆ ಅತ್ಯಂತ ಪವಿತ್ರ, ಯಾವುದೇ ಹಾನಿಯಾಗಬಾರದು. ಪ್ರವಾಸಿಗರಿಗೆ ರಕ್ಷಣೆ ವ್ಯವಸ್ಥೆ ಆಗುವ ರೀತಿಯಲ್ಲಿ ಅಭಿವೃದ್ಧಿಯ ನಿಟ್ಟಿನಲ್ಲಿ ರೂಪರೇಷೆ ಆಗಬೇಕು. ರವೀಂದ್ರನಾಥ ರೈ, ಅಧ್ಯಕ್ಷರು, ಸೋಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ https://www.vijayavani.net/national-voters-day-7 https://www.vijayavani.net/award-funtion