ಜಿಲ್ಲೆ

ಸೋಮವಾರಪೇಟೆಯಲ್ಲಿ ಸಂಭ್ರಮದ ಅಕ್ಷರ ಜಾತ್ರೆ

ಸೋಮವಾರಪೇಟೆ: ಪ್ರಕೃತಿ ಮಡಿಲಲ್ಲಿರುವ, ಪಾಳೆಗಾರರ ನಾಡು ಗೌಡಳ್ಳಿಯಲ್ಲಿ 8ನೇ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ಶನಿವಾರ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನಡೆಯಿತು.


ಗೌಡಳ್ಳಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಭಾಗದ ಸಾವಿರಾರು ಕನ್ನಡಾಭಿಮಾನಿಗಳು ಭಾಗವಹಿಸಿ ಕನ್ನಡ ಹಬ್ಬಕ್ಕೆ ಮೆರಗು ತಂದರು. ರೈತಾಪಿ ವರ್ಗ ಸಮ್ಮೇಳನದ ಪೂರ್ಣ ಜವಾವ್ದಾರಿ ವಹಿಸಿಕೊಂಡು ಮುನ್ನಡೆಸಿದರು. ಬೆಳಗ್ಗೆ 8 ಗಂಟೆಗೆ ಸೋಮವಾರಪೇಟೆ ತಹಸೀಲ್ದಾರ್ ಎಸ್.ಎನ್.ನರಗುಂದ ಬಿಜಿಎಸ್ ಶಾಲಾ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್, ಕನ್ನಡ ಧ್ವಜ ಹಾಗೂ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್ ಕನ್ನಡ ಪರಿಷತ್ ಧ್ವಜಾರೋಹಣ ನೆರವೇರಿಸಿದರು.


ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡಮಳ್ತೆಯ ಹೊನ್ನಮ್ಮನಕೆರೆ ದೇವಾಲಯದಿಂದ ಗ್ರಾಮೀಣ ಯುವಕರು ಕನ್ನಡ ಬಾವುಟದೊಂದಿಗೆ ಬೈಕ್ ಜಾಥಾ ನಡೆಸಿ ಗಮನ ಸೆಳೆದರು. ಬೀಟಿಕಟ್ಟೆ ಜಂಕ್ಷನ್‌ನಲ್ಲಿ ಸಮಾವೇಶಗೊಂಡ ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಮ್ಮೇಳನಾಧ್ಯಕ್ಷರಾದ ಶ.ಗ.ನಯನತಾರಾ, ಸ್ಥಳೀಯ ಶಾಸಕರು, ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್, ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಕರೆದೊಯ್ಯಲಾಯಿತು. ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ತಂಡ ಅಕರ್ಷಿಸಿತು.


ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಮುಖ್ಯ ವೇದಿಕೆಯಲ್ಲಿ ನಡೆದ ಸಮಾರಂಭವನ್ನು ಸ್ಥಳೀಯ ಶಾಸಕರು ಉದ್ಘಾಟಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕನ್ನಡ ನಾಡಿನ ತೇರು ನಿರಂತರವಾಗಿ ಸಾಗಬೇಕು. ಬಹುಸಂಸ್ಕೃತಿಯ ಈ ನಾಡಿನಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ಪ್ರಾಚೀನ ಭಾಷೆಯಾಗಿದ್ದು, ಖಾಸಗೀಕರಣ, ಉದಾರೀಕರಣ ನಡುವೆಯೂ ಭಾಷೆ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಸಾಹಿತ್ಯ ಪರಿಷತ್ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಮ್ಮೇಳನಗಳನ್ನು ನಡೆಸಿ ಯಶಸ್ವಿಯಾಗಿದೆ ಎಂದರು.


ಮಾಜಿ ಸಚಿವ ಬಿ.ಎ.ಜೀವಿಜಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಸಬೇಕಿದೆ. ದೇಶದಲ್ಲಿ 5,600 ಭಾಷೆಗಳಿವೆ. ಇದರಲ್ಲಿ ಕೆಲವು ವಿನಾಶದ ಅಂಚಿನಲ್ಲಿವೆ. ಇಂತಹ ಸಂದರ್ಭದಲ್ಲಿ ನಮ್ಮನಾಳುವ ಆಡಳಿತ ವ್ಯವಸ್ಥೆ ಹಿಂದಿ ಭಾಷೆಯನ್ನು ಹೇರುವ ಮೂಲಕ ಭಾಷಾ ಸ್ವತಂತ್ರಕ್ಕೆ ಧಕ್ಕೆ ಉಂಟು ಮಾಡುತ್ತಿರುವುದು ದುರಂತ ಎಂದರು.
ನಿಕಟಪೂರ್ವ ಅಧ್ಯಕ್ಷ ಹೆಬ್ಬಾಲೆ ಕೆ.ನಾಗೇಶ್ ಮಾತನಾಡಿ, ಪರಿಷತ್ ಧ್ವಜವನ್ನು ಸಮ್ಮೇಳನಾಧ್ಯಕ್ಷರಾದ ನಯನತಾರ ಅವರಿಗೆ ಹಸ್ತಾಂತರಿಸಿ ಆಶಯ ನುಡಿಗಳನ್ನಾಡಿದರು. ಸಾಹಿತಿ ಬೆಸ್ಸೂರು ಮೋಹನ್ ಪಾಳೇಗಾರ್ ಬರೆದ ವಲಸೆ ಹಕ್ಕಿಯ ಹಾಡುಪಾಡು ಮತ್ತು ಲೇಖಕಿ ಜಲಕಾಳಪ್ಪ ಬರೆದ ಭರವಸೆಯ ಬೆಳಕು ಪುಸ್ತಕಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಬಿಡುಗಡೆಗೊಳಿಸಿದರು.

ಸಮ್ಮೇಳನ ಏಕತೆಯ ಸಂಕೇತ: ಸಮ್ಮೇಳನಾಧ್ಯಕ್ಷರಾದ ಶ.ಗ.ನಯನತಾರ ಮಾತನಾಡಿ, ಸಾಹಿತ್ಯ ಸಮ್ಮೇಳನ ಏಕತೆಯ ಸಂಕೇತವಾಗಿದ್ದು, ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಹಾಗೂ ಕಲಾವಿದರನ್ನು ಒಂದುಗೂಡಿಸಿ, ಪ್ರೇರಣೆ ಹಾಗೂ ಜಾಗೃತಿ ಮೂಡಿಸುವ ಮೂಲಕ ಸಮ್ಮೇಳನ ಕನ್ನಡ ಸಂಸ್ಕೃತಿ ಬೆಳಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕವೂ ಭಾಷೆಯನ್ನು ಅರಳಿಸಬಹುದು. ಆದರೆ ಸರ್ಕಾರಿ ಶಾಲೆಗಳಲ್ಲೂ ಆಂಗ್ಲಮಾಧ್ಯಮ ಪ್ರಾರಂಭಿಸಿದ್ದರಿಂದ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಇಂಗ್ಲಿಷ್ ಭಾಷೆ ಇದ್ದರೂ ಕನ್ನಡಕ್ಕೆ ಪ್ರಥಮ ಅದ್ಯತೆ ನೀಡಬೇಕು ಎಂದರು.


ಜಿಲ್ಲೆಯಲ್ಲಿ ಎಲೆಮರೆಕಾಯಿಯಂತಿರುವ ಗ್ರಾಮೀಣ ಭಾಗದ ಮಹಿಳಾ ಬರಹಗಾರರನ್ನು ಗುರುತಿಸಿ ಮಾರ್ಗದರ್ಶನ ನೀಡಬೇಕು. ಮಹಿಳಾ ಶೋಷಣೆ, ದೌರ್ಜನ್ಯಗಳಿಗೆ ಇತಿಶ್ರೀ ಹಾಡಬೇಕು. ಸಂಘಟಿತ ಮಹಿಳೆಯರು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.


ಸಾಹಿತ್ಯ ಮನೆ ಮನೆಗೆ ತಲುಪಲಿ: ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಶಂಭುನಾಥಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಸಾಹಿತ್ಯ ಪ್ರೇಮವನ್ನು ಬೆಳೆಸುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಶ್ರಮಿಸಬೇಕು. ಸಾಹಿತ್ಯ ಮನೆಮನೆಗೆ ತಲುಪುವ ಕೆಲಸ ಮಾಡಬೇಕು. ಮನೆಮನೆಗಳಲ್ಲಿ ಕವಿಗೋಷ್ಠಿ ಆಗಬೇಕು ಎಂದರು.
ಕನ್ನಡವನ್ನು ನೆನಪಿಸುವ ಕಾರ್ಯಕ್ರಮ ನವೆಂಬರ್ ತಿಂಗಳಿಗೆ ಮಾತ್ರ ಸಿಮೀತವಾಗಬಾರದು. ಅದು ನಿತ್ಯನಿರಂತರ ಆಗಬೇಕು. ಸಾಹಿತ್ಯವನ್ನು ಮಕ್ಕಳಿಂದಲೇ ಬೆಳೆಸಬೇಕೆನ್ನುವ ಉದ್ದೇಶದಿಂದ ಶ್ರೀಮಠದ ಆಶಯದಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಮಕ್ಕಳ ಸಾಹಿತ್ಯ ಪರಿಷತ್‌ನ ಘಟಕ ತೆರೆದಿದ್ದೇವೆ ಎಂದರು.


ಕ.ಸಾ.ಪ. ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ.ವಿಜಯ, ಗೌಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಜಿ.ಜಿ.ಮಲ್ಲಿಕಾ, ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷೆ ಕೆ.ಎಂ.ಬಿಂದು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ಕ.ಸಾ.ಪ. ಕಾರ್ಯದರ್ಶಿ ಜ್ಯೋತಿ ಅರುಣ್, ಮತ್ತು ಗಣ್ಯರು, ಪರಿಷತ್ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಇದ್ದರು.