ಜಿಲ್ಲೆ

ಸೋಮವಾರಪೇಟೆ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಚುರುಕು

ಸೋಮವಾರಪೇಟೆ: ತಾಲೂಕಿನಾದ್ಯಂತ ಮಳೆ ಬಿರುಸುಗೊಂಡಿದ್ದು, ಗದ್ದೆ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಜೂನ್ ತಿಂಗಳು ಪೂರ್ತಿ ಮುಂಗಾರು ದುರ್ಬಲಗೊಂಡಿತ್ತು. ಇದರಿಂದ ಭತ್ತದ ಕಣಜ ಎಂದೇ ಕರೆಸಿಕೊಳ್ಳುವ ತಾಲೂಕಿನಲ್ಲಿ ಬರದ ಆತಂಕ ಮನೆ ಮಾಡಿತ್ತು. ರೈತರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯಯುತ್ತಿದ್ದರು. ಕಳೆದ ನಾಲ್ಕು ದಿನದಿಂದ ಸಾಧಾರಣ ಮಳೆ ಬೀಳುತ್ತಿದ್ದು, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.


ಗದ್ದೆ ಭೂಮಿಯಲ್ಲಿ ತೇವಾಂಶ ಅಧಿಕವಾಗಿರುವ ಹಿನ್ನೆಲೆಯಲ್ಲಿ ಕೃಷಿ ಸಂಬಂಧಿತ ಚಟುವಟಿಕೆಗಳು ಕಂಡುಬರುತ್ತಿವೆ. ಗದ್ದೆಗಳಲ್ಲಿ ಉಳುಮೆ, ಬಿತ್ತನೆ, ಸಸಿಮಡಿ ತಯಾರಿ ಕಾರ್ಯ ನಡೆಯುತ್ತಿದೆ. ಎಲ್ಲೆಡೆ ಭತ್ತ ಗದ್ದೆ ಹದಗೊಳಿಸುತ್ತಿರುವ ಚಿತ್ರಣ ಕಂಡುಬರುತ್ತಿದೆ. ತಾಲೂಕಿನ ಶಾಂತಳ್ಳಿ ಹೋಬಳಿಯಾದ್ಯಂತ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ರೈತರು ಎತ್ತು ಹಾಗೂ ನೇಗಿಲಿನೊಂದಿಗೆ ಗದ್ದೆಗೆ ಇಳಿದಿದ್ದಾರೆ. ದೀರ್ಘಾವಧಿ ತಳಿಗಳ ಸಸಿಮಡಿ ಮಾಡಿದ್ದಾರೆ. ಈಗ ಹೈಬ್ರೀಡ್ ತಳಿಗಳ ಬಿತ್ತನೆ ಪ್ರಾರಂಭವಾಗಿದೆ.


ಗದ್ದೆಗಳನ್ನು ಉಳುಮೆ ಕಾರ್ಯಕ್ಕೆ ಸಿದ್ಧಪಡಿಸುವ ಸಂಬಂಧ ಕೆಲ ರೈತರು ಟಿಲ್ಲರ್, ಟ್ರ್ಯಾಕ್ಟರ್ ಸೇರಿದಂತೆ ಯಂತ್ರೋಪಕರಣಗಳ ಮೊರೆ ಹೋಗಿದ್ದಾರೆ. ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದವವರು ಸಾಂಪ್ರದಾಯಿಕ ಜೋಡೆತ್ತಿಗೆ ನೇಗಿಲು ಕಟ್ಟಿಕೊಂಡು ಉಳುಮೆ ಮಾಡುತ್ತಿದ್ದಾರೆ. ನಾಲ್ಕೈದು ಕುಟುಂಬಗಳು ಸೇರಿಕೊಂಡು ನಾಲ್ಕೈದು ಜೋಡಿಗಳೊಂದಿಗೆ ಉಳುಮೆ ಮಾಡಿಕೊಂಡು ತರಾತುರಿಯಲ್ಲಿ ನಾಟಿಗೆ ಗದ್ದೆಯನ್ನು ಹದಗೊಳಿಸುತ್ತಿದ್ದಾರೆ. ಮಳೆ ಇದ್ದಾಗಲೇ ಸಸಿನಾಟಿ ಮುಗಿಸಿಕೊಳ್ಳಬೇಕು. ಮಳೆ ಬೀಳುವುದು ನಿಂತರೆ ಹದ ಮಾಡಿದ ಗದ್ದೆಗಳು ಒಣಗಿ ನಂತರ ಮತ್ತೊಮ್ಮೆ ಉಳುಮೆ ಮಾಡಬೇಕಾಗುತ್ತದೆ. ಈ ಕಾರಣದಿಂದ ಮುಯ್ಯಳಿನ ಮೂಲಕ ಕೆಲಸ ಮಾಡುತ್ತಿದ್ದಾರೆ.


ಪುಷ್ಪಗಿರಿ ತಪ್ಪಲಿನಲ್ಲಿ ಹುಟ್ಟಿ ಗ್ರಾಮೀಣ ಭಾಗದಲ್ಲಿ ಹರಿಯುವ ಕುಮಾರಧಾರ ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿದೆ. ಕೃಷಿ ಚಟುವಟಿಕೆಗೆ ನೀರಿನ ಅವಶ್ಯಕತೆಯನ್ನು ನೀಗಿಸುತ್ತಿದೆ. ಸಣ್ಣಪುಟ್ಟ ಹಳ್ಳಕೊಳ್ಳ, ನದಿತೊರೆಗಳಲ್ಲಿ ನೀರಿನ ಹರಿವು ಹೆಚ್ಚಿದೆ. ತಾಲೂಕಿನ ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ಹೋಬಳಿಯಲ್ಲಿಯೂ ಕೃಷಿ ಕಾರ್ಯ ಪ್ರಗತಿಯಲ್ಲಿದೆ.


ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಪ್ರತಿದಿನವೂ ಉತ್ತಮ ಮಳೆಯಾಗುತ್ತಿದೆ. ಈ ವ್ಯಾಪ್ತಿಯ ಬೆಟ್ಟದಳ್ಳಿ, ಕುಮಾರಳ್ಳಿ, ಬೀದಳ್ಳಿ, ಹೆಗ್ಗಡಮನೆ, ಕೊತ್ನಳ್ಳಿ, ಬೀಕಳ್ಳಿ, ಹಂಚಿನಳ್ಳಿ, ನಾಡ್ನಳ್ಳಿ, ಕುಡಿಗಾಣ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಮುಂದಿನ 10 ದಿನಗಳಲ್ಲಿ ನಾಟಿ ಕಾರ್ಯ ಪ್ರಾರಂಭಿಸುವುದಾಗಿ ಕುಡಿಗಾಣ ಗ್ರಾಮದ ಕೃಷಿಕ ದಿನೇಶ್ ವಿಜಯವಾಣಿಗೆ ತಿಳಿಸಿದರು.