ಜಿಲ್ಲೆ

ಸೋಮನಹಳ್ಳಿ ಸಂಘಕ್ಕೆ 6.50 ಲಕ್ಷ ರೂ.ಲಾಭ

ಮದ್ದೂರು: ಸೋಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸ್ತುತ ವರ್ಷ 6.50 ಲಕ್ಷ ರೂ.ಲಾಭಗಳಿಸುವ ಜತೆಗೆ ನಿರಂತರವಾಗಿ ರೈತರ ಹಾಗೂ ಷೇರುದಾರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಸಿ.ಟಿ.ಶಂಕರ್ ಹೇಳಿದರು.

ಸಂಘದ ಆವರಣದಲ್ಲಿ ಮಂಗಳವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 1362 ಜನ ಷೇರುದಾರರಿದ್ದು, ಸಂಘದ ವತಿಯಿಂದ ವಾರ್ಷಿಕ 5.53 ಕೋಟಿ ರೂ.ವಹಿವಾಟು ನಡೆಸಲಾಗುತ್ತಿದೆ. ಸಂಘದಿಂದ ಕಿಸಾನ್ ಕಾರ್ಡ್ ಸಾಲ 3.55 ಕೋಟಿ ರೂ., ಮಧ್ಯಮಾವಧಿ ಸಾಲ 27 ಲಕ್ಷ ರೂ., ಸ್ವಸಹಾಯ ಗುಂಪಿನ ಸಾಲ 18 ಲಕ್ಷ ರೂ. ಹಾಗೂ ಗೊಬ್ಬರ ಮಾರಾಟದಿಂದ 18.50 ಲಕ್ಷ ರೂ.ವಹಿವಾಟು ನಡೆಸಲಾಗಿದೆ. ಸಂಘದ ಕಟ್ಟಡವು ಹಳೆಯದಾಗಿದ್ದು, ನೂತನ ಕಟ್ಟಡ ಕಾಮಗಾರಿ ಪ್ರಾರಂಭವಾಗಿದೆ. ಮುಂದಿನ ವಾರ್ಷಿಕ ಸಭೆಯ ವೇಳೆಗೆ ಉದ್ಘಾಟನೆಯಾಗಲಿದ್ದು, ಕಟ್ಟಡದಲ್ಲಿ ಸಭಾಂಗಣ, ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳು ಸೇರಿದಂತೆ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಲಿದೆ. ಈಗಾಗಲೇ ಕಟ್ಟಡ ಅಭಿವೃದ್ಧಿಗಾಗಿ ಶಾಸಕ ಕೆ.ಎಂ.ಉದಯ್ 10 ಲಕ್ಷ ರೂ.ಅನುದಾನ ನೀಡಿದ್ದಾರೆ ಎಂದರು.

ಸಂಘದ ಉಪಾಧ್ಯಕ್ಷ ಬಸವರಾಜು, ನಿರ್ದೇಶಕರಾದ ಮಹದೇವು, ಬೋರೇಗೌಡ, ಶಿವಣ್ಣ, ಜಯಲಕ್ಷ್ಮಮ್ಮ, ಗಂಟಯ್ಯ, ರಘುನಂದನ್, ಮಲ್ಲಿಕಾ, ಕೆ.ಟಿ.ಪ್ರಕಾಶ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಮಣಿ, ಸಿಬ್ಬಂದಿ ಕೃಷ್ಣ ಇದ್ದರು.