ಜಿಲ್ಲೆ

ಸೋಮನಕಟ್ಟಿ ಶಾಲೆ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

ಹೊಳೆಆಲೂರ: ಸ್ಪರ್ಧಾತ್ಮಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬಲಪಡಿಸಲು ಸರ್ಕಾರ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದರೂ ಸಾರ್ವಜನಿಕರ ಸಹಭಾಗಿತ್ವದ ಕೊರತೆಯಿಂದ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಪರಿವರ್ತನೆಯ ಅಕಾಡೆಮಿಯ ಅಧ್ಯಕ್ಷ ಮಂಜುನಾಥ ಬಸರಕೋಡ ಹೇಳಿದರು. ಸಮೀಪದ ಸೋಮನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 120 ಮಕ್ಕಳಿಗೆ 50 ಸಾವಿರ ರೂ.ವೆಚ್ಚದಲ್ಲಿ ಬೆಂಗಳೂರಿನ ಪ್ರಣವ್ ಫೌಂಡೇಷನ್ ವತಿಯಿಂದ ನೋಟ್ ಪುಸ್ತಕ, ಕಂಪಾಸ್ ಸೇರಿದಂತೆ ವಿವಿಧ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮೂಡಬೇಕಾದರೆ ಸರ್ಕಾರದ ಯೋಜನೆಯ ಜತೆಗೆ ಸ್ಥಳೀಯ ಸಂಘ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದರು. ಮುಖ್ಯಶಿಕ್ಷಕ ಎಚ್.ವಿ. ಬ್ಯಾಡಗಿ ಅಧ್ಯಕ್ಷತೆ ವಹಿಸಿದ್ದರು. ಸಿದ್ದಲಿಂಗಯ್ಯ ಹಿರೇಮಠ, ಸಿ.ಎನ್. ಗಿರಡ್ಡಿ, ಸುಮಿತಾ ಹಿರೇಮನಿ, ಅಬ್ದುಲರೆಹಮಾನ ಕಲೆಗಾರ, ನಿಸಾರ್ ಅಹ್ಮದ್ ತಹಶೀಲ್ದಾರ್ ಇತರರಿದ್ದರು.