ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಇನ್ನೂ 4 ವರ್ಷ ಜನಪರ ಗ್ಯಾರಂಟಿ ಯೋಜನೆಗಳು ಇರಲಿವೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುವೆ. ಸೋತ ಮಾತ್ರಕ್ಕೆ ಬೆನ್ನು ತೋರಿಸಿ ಹೋಗಲಾರೆ ಎಂದು ತಿಳಿಸಿದರು.
ಜಾತ್ಯತೀತ ಜನತಾದಳ ಮತಗಳು ಬಿಜೆಪಿ ಜತೆ ಕೈಜೋಡಿಸುವುದಿಲ್ಲ ಎಂಬ ನಂಬಿಕೆ ಇತ್ತು. ಆದರೆ, ಮೈತ್ರಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಅನಿರೀಕ್ಷಿತ ಫಲಿತಾಂಶದಿಂದ ಬೇಸರ ಮಾಡಿಕೊಳ್ಳಲಾರೆ. ಈ ಕ್ಷೇತ್ರ ನನಗೆ ಕರ್ಮ ಭೂಮಿ. ಹೀಗಾಗಿ ಜನತೆಯ ಸೇವೆ ಮಾಡಲು ಬದ್ಧನಾಗಿದ್ದೇನೆ ಎಂದರು.
ಸಂಸದರು ಯಾರೇ ಆದರೂ ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರ ಇಲ್ಲದೆ ಯಾವ ಅಭಿವೃದ್ಧಿ ಕಾರ್ಯವೂ ಆಗುವುದಿಲ್ಲ. ಕೇಂದ್ರ ಸರ್ಕಾರದಿಂದ ಅನುದಾನ ತಂದು ಕ್ಷೇತ್ರವನ್ನು ಪ್ರಗತಿಯಲ್ಲಿ ಮುನ್ನಡೆಸಿದರೆ, ಗೋವಿಂದ ಕಾರಜೋಳ ಅವರೊಂದಿಗೆ ಕೈಜೋಡಿಸಲು ಸಿದ್ಧ ಎಂದು ಹೇಳಿದರು.
ಕೇಂದ್ರದಲ್ಲಿ ಸಚಿವರಾಗಿರುವ ರಾಜ್ಯದ ನಾಲ್ವರು ಎರಡು ತಿಂಗಳಲ್ಲಿ ಸಂಪೂರ್ಣ ಅಭಿವೃದ್ಧಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಕಡಿಮೆ ಸಮಯದಲ್ಲಿ ಪ್ರಗತಿ ಸಾಧಿಸಲು ಇದೇನೂ ಜಾದುವಲ್ಲ ಎಂದು ವ್ಯಂಗ್ಯವಾಡಿದರು.
ಲೋಕಸಭಾ ಚುನಾವಣೆ ವೇಳೆ ಉತ್ತರ ಭಾರತದಲ್ಲಿ ಯಾದವ ಸಮುದಾಯ ಬಿಜೆಪಿ ವಿರುದ್ಧವಾಗಿತ್ತು. ಅದೇ ರೀತಿ ಕರ್ನಾಟಕದಲ್ಲೂ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಕೊನೇ ಕ್ಷಣದ ಬದಲಾವಣೆಯಿಂದ ಫಲಿತಾಂಶದ ಮೇಲೂ ಪರಿಣಾಮ ಬೀರಿರಬಹುದು ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಕೆ.ಪಿ.ಸಂಪತ್‌ಕುಮಾರ್, ಕೆ.ಎಂ.ಹಾಲಸ್ವಾಮಿ, ಲಕ್ಷ್ಮಿಕಾಂತ್, ಡಿ.ಎನ್.ಮೈಲಾರಪ್ಪ, ಬಾಲಕೃಷ್ಣ ಯಾದವ್, ಎಸ್.ಎನ್.ರವಿಕುಮಾರ್, ಮರುಳಾರಾಧ್ಯ, ಪ್ರಕಾಶ್, ಮುದಸಿರ್ ಇತರರಿದ್ದರು.