ಜಿಲ್ಲೆ

ಸೋತ ನರೇಂದ್ರರಿಗೆ ಎಂಎಲ್‌ಸಿ ಸ್ಥಾನ ನೀಡಿ

ಹನೂರು: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಮಾಜಿ ಶಾಸಕ ಆರ್.ನರೇಂದ್ರ ಅವರಿಗೆ ಪಕ್ಷದ ನಾಯಕರು ಎಂಎಲ್‌ಸಿ ಸ್ಥಾನವನ್ನು ನೀಡುವಂತೆ ಒತ್ತಾಯಿಸಿದರು.


ಆರ್.ನರೇಂದ್ರ ಅವರು ಕಾಂಗ್ರೆಸ್‌ನಲ್ಲಿ ಸತತ 3 ಬಾರಿ ಜಯಗಳಿಸಿದ್ದಾರೆ. ಈ ಅವಧಿಯಲ್ಲಿ ಅನೇಕ ಶಾಶ್ವತ ಯೋಜನೆಗಳು ಅನುಷ್ಠಾನಗೊಂಡಿದ್ದವು. ಈ ದಿಸೆಯಲ್ಲಿ ನರೇಂದ್ರ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಕಾರ್ಯಕರ್ತರು ಬಲವಾದ ವಿಶ್ವಾಸವನ್ನು ಇಟ್ಟುಕೊಂಡಿದ್ದರು. ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ ಈ ಬಾರಿಯ ಚುನಾವಣೆಯಲ್ಲಿ ಅವರು ಸೋಲಬೇಕಾಗಿ ಬಂತು. ಇದರಿಂದ ಕಾರ್ಯಕರ್ತರಲ್ಲಿ ಇನ್ನಿಲ್ಲದ ಬೇಸರ ಮನೆ ಮಾಡಿದೆ. ಹಾಗಾಗಿ ನರೇಂದ್ರ ಅವರಿಗೆ ಎಂಎಲ್‌ಸಿ ಸ್ಥಾನಮಾನ ಕೊಡಿ ಎಂದು ಆಗ್ರಹಿಸಿದರು.


ಕಳೆದ 15 ವರ್ಷದ ಅವಧಿಯಲ್ಲಿ ನರೇಂದ್ರ ಅವರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಜತೆಗೆ ಪಕ್ಷದ ಸಂಘಟನೆಯನ್ನು ಉತ್ತಮಗೊಳಿಸಿದ್ದಾರೆ. ಆದರೆ ಈ ಬಾರಿ ಇತರೆ ಪಕ್ಷದ ಕುತಂತ್ರದಿಂದ ಸೋಲಬೇಕಾಯಿತು. ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನ ಪಡೆದುಕೊಂಡಿದ್ದು, ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಆದ್ದರಿಂದ ಪಕ್ಷದ ಹಿರಿಯ ನಾಯಕರು ನರೇಂದ್ರ ಅವರಿಗೆ ಎಂಎಲ್ಸಿ ಸ್ಥಾನ ನೀಡುವಂತೆ ಒತ್ತಾಯಿಸಿದರು.


ಎದೆಗುಂದಬೇಡಿ, ಧೈರ್ಯದಿಂದಿರಿ:
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಪ್ರತಿಯೊಬ್ಬರೂ ಪಕ್ಷದ ಸಂಘಟನೆ ಹಾಗೂ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಆದರೆ ಜನತೆ ನಮ್ಮನ್ನು ಕೈ ಹಿಡಿಯಲಿಲ್ಲ. ಆದರೂ ಧೈರ್ಯದಿಂದ ಇರಿ. ನಿಮ್ಮೊಂದಿಗೆ ಸದಾ ನಾನೀರುತ್ತೇನೆ ಎಂದು ಸಾಂತ್ವನ ಹೇಳಿದರು.


ಕಳೆದ 15 ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ನಮ್ಮ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಮೂರೂವರೆ ಸಾವಿರ ಕೋಟಿ ರೂ. ಅನುದಾನ ಲಭಿಸಿತ್ತು. ಅದರಲ್ಲಿ ರಸ್ತೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ, ಏಕಲವ್ಯ, ಮುರಾರ್ಜಿ, ಇಂದಿರಾಗಾಂಧಿ ವಸತಿ ಶಾಲೆ ಹಾಗೂ ಹಾಸ್ಟೆಲ್‌ಗಳ ಸ್ಥಾಪನೆ, ಹನೂರು ತಾಲೂಕು ರಚನೆ, ಬಸ್ ನಿಲ್ದಾಣ ಸೇರಿದಂತೆ ಇನ್ನು ಹಲವು ಶಾಶ್ವತ ಯೋಜನೆಗಳು ನಡೆದಿದೆ. ಇಷ್ಟೊಂದು ಅಭಿವೃದ್ಧಿ ಕಾರ್ಯಗಳು ಯಾವ ಅವಧಿಯಲ್ಲೂ ನಡೆದಿರಲಿಲ್ಲ. ಜನತೆ ಇದನ್ನು ಮನದಟ್ಟು ಮಾಡಿಕೊಳ್ಳಲಿಲ್ಲ. ಆದರೂ ಜನರು ನೀಡಿರುವ ತೀರ್ಪಿಗೆ ತಲೆ ಬಾಗುತ್ತೇನೆ ಎಂದು ತಿಳಿಸಿದರು.


ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ: ಕಾಂಗ್ರೆಸ್ ಪಕ್ಷ ತಾಯಿ ಸಮಾನ. ಹಾಗಾಗಿ ಪ್ರತಿಯೊಬ್ಬರೂ ಕಳೆದ 40 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿರುವುದು ಮೆಚ್ಚುವ ಸಂಗತಿ. ಆದರೆ ಈ ಬಾರಿ ಸೋತಿದ್ದೇವೆ. ಆದಾಗ್ಯೂ ಯಾವುದೇ ಕಾರಣಕ್ಕೂ ಎದೆಗುಂದಬೇಕಾದ ಅವಶ್ಯಕತೆ ಇಲ್ಲ. ಆದ್ದರಿಂದ ಮುಂಬರುವ ತಾಪಂ, ಜಿಪಂ ಚುನಾವಣೆಗೆ ಈಗಿನಿಂದಲೇ ಸಜ್ಜಾಗಬೇಕಿದ್ದು, ಗ್ರಾಪಂ ಮಟ್ಟದಿಂದ ಪಕ್ಷವನ್ನು ಇನ್ನಷ್ಟು ಸಂಘಟಿಸಬೇಕಿದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಒತ್ತು ನೀಡುವಂತೆ ಮನವಿ ಮಾಡಿದರು.


ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಮಾತನಾಡಿ, ನರೇಂದ್ರ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು, ಅನೇಕ ಕಾರ್ಯಗಳು ನಡೆದಿದೆ. ಆದರೆ ಇತರೆ ಪಕ್ಷದವರು ನರೇಂದ್ರ ಅವರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದಾರೆ. ಇದರಿಂದ ಸೋಲಬೇಕಾಯಿತು. ಕಾರ್ಯಕರ್ತರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಹಾಗಾಗಿ ಸೋಲಿನ ಹೊಣೆಯನ್ನು ನಾವೇ ಹೊರುತ್ತೇವೆ ಎಂದು ತಿಳಿಸಿದರು.


ಸಭೆಯಲ್ಲಿ ಹನೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮುಕುಂದ ವರ್ಮ, ಪಪಂ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಸುದೇಶ್, ಸಂಪತ್‌ಕುಮಾರ್, ಗ್ರಾಪಂ ಅಧ್ಯಕ್ಷೆ ಸುಧಾ, ಮಾಜಿ ಉಪಾಧ್ಯಕ್ಷ ಬಸವರಾಜು, ಮುಖಂಡರಾದ ಎಸ್.ಮಹೇಶ್, ನಾಗೇಶ್, ಮಣಿ, ಮಹದೇವ ಹಾಗೂ ಇತರರು ಇದ್ದರು.