ಬಾಗಲಕೋಟೆ: ಎಚ್.ಐ.ವಿ.ಏಡ್ಸ್ ಕಾಯಿಲೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವದು ಹಾಗೂ ತಮ್ಮ ಸ್ನೇಹಿತರನ್ನು ಮತ್ತು ಕುಟುಂಬಸ್ಥರನ್ನು ಈ ಸೋಂಕು ಹರಡದಂತೆ ಜಾಗೃತ ವಹಿಸುವುದು ಇಂದಿನ ಯುವಕರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ ಹೇಳಿದರು.
ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ಬಿವಿವಿ ಸಂಘದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೋಮವಾರ ರಾಜ್ಯ ಏಡ್ಸ ಪ್ರಿವೆನ್ಸನ್ ಸೊಸೈಟಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ. ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಂತರರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಇಂದಿನ ಡಿಜಿಟಲ್ ಯುಗದಲ್ಲಿ ಯುವಕರು ಬದುಕಬೇಕಿದೆ. ಡಿಜಿಟಲ್ ತಂತ್ರಜ್ಞಾನವನ್ನು ತಮ್ಮ ಭವಿಷ್ಯೆದ ಏಳ್ಗೆಗಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಒಳ್ಳೆಯ ಅಂಶಗಳನ್ನು ತಮ್ಮ ಭವಿಷ್ಯಕ್ಕಾಗಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಉಪ ಕಾನೂನು ಅಭಿರಕ್ಷಕ ಪ್ರಶಾಂತ ನಾರಾಯಣಕರ ಮಾತನಾಡಿ, ಇಂದಿನ ಯುವಕರು ತಮ್ಮ ಜೀವನದಲ್ಲಿ ಯಾವುದೋ ಕ್ಷಣ ತೃಪ್ತಿಗಾಗಿ ತಮ್ಮ ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಎಚ್.ಐ.ವಿ. ಸೋಂಕಿನಿಂದ ಪಾರಾಗುವುದು ಹೇಗೆ ಎಂಬುದನ್ನು ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಎಸ್. ಎಸ್ ಅಧಿಕಾರಿ ಬಿ.ಡಿ.ಕೆಂಗಾಪುರ, ರೆಡ್‌ರಿಬ್ಬನ್ ಕ್ಲಬ್‌ನ ಅಧಿಕಾರಿ ಕೊಪ್ಪರದ ಸೇರಿದಂತೆ ವಿವಿಧ ಉಪನ್ಯಾಸಕ ವೃಂದದವರು ಮತ್ತು ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಎಂ.ಎಚ್.ಸುಬೇದಾರ ಸ್ವಾಗತಿಸಿ ಕೊನೆಗೆ ವಂದಿಸಿದರು.