ಕನಕಪುರ: ನಗರ ವ್ಯಾಪ್ತಿಯಲ್ಲಿ ಕರೊನಾ ಸೋಂಕು ಹೆಚ್ಚಾಗಿ ಹರಡುತ್ತಿದ್ದು, ಹಸಿರು ಜಿಲ್ಲೆಯಾಗಿದ್ದ ರಾಮನಗರಕ್ಕೆ ಕನಕಪುರದಿಂದ ಕಳಂಕ ಬಂದಿರುವ ಅಶುಭ ವಾರ್ತೆ ತೀವ್ರವಾಗಿ ಕಾಡುತ್ತಿದೆ. ಇದನ್ನು ತೊಡೆದುಹಾಕಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರಸಭಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಅರ್ಚನಾ ಅಧ್ಯಕ್ಷತೆಯಲ್ಲಿ ಕರೊನಾ ಸೋಂಕು ತಡೆಗಟ್ಟುವ ಬಗ್ಗೆ ಭಾನುವಾರ ಆಯೋಜಿಸಿದ್ದ ಸಾರ್ವಜನಿಕರು, ವರ್ತಕರು, ಸಂಘಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕರೊನಾ ತಡೆಯಲು ಜನರಿಂದ ಬಂದ ಸಲಹೆಗಳನ್ನು ಸುದೀರ್ಘವಾಗಿ ಆಲಿಸಿ ಅದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ಚರ್ಚಿಸಿ ವ್ಯಾಪಾರಿಗಳು, ಸಾರ್ವಜನಿಕರು ಸರ್ಕಾರ ಜಾರಿಗೆ ತಂದಿರುವ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಕರೊನಾ ಬಗ್ಗೆ ಸಾರ್ವಜನಿಕರಲ್ಲಿ ಭಯಬೇಡ. ಧೈರ್ಯವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರ ಜತೆಗೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ ನಿಯಮಗಳನ್ನು ಪಾಲಿಸಿ ಎಂದು ತಿಳಿಸಿದರು.
ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ವರ್ತಿಕರು ಜೂ.22 ಸೋಮವಾರದಿಂದ 31 ರವರೆಗೆ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಡಾ.ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪ್ ಎ.ಶೆಟ್ಟಿ, ಪರಿಷತ್ ಸದಸ್ಯ ಎಸ್.ರವಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ನಗರಸಭಾ ಆಯುಕ್ತ ಡಾ.ಕೆ.ಮಾಯಣ್ಣಗೌಡ, ತಹಸೀಲ್ದಾರ್ ವರ್ಷಾಒಡೆಯರ್, ತಾಪಂ ಅಧಿಕಾರಿ ಶಿವರಾಮು, ನಗರಸಭಾ ಸದಸ್ಯರಾದ ರಾಜು, ಸ್ಟುಡಿಯೋಚಂದ್ರು ಮತ್ತಿತರರಿದ್ದರು.
ಏನಿರುತ್ತೆ ಏನಿರಲ್ಲ : ಸ್ವಯಂ ಪ್ರೇರಿತ ಬಂದ್ ವೇಳೆ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಜನತೆ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಹಾಲು, ದಿನಪತ್ರಿಕೆ, ಮೆಡಿಕಲ್ ಸ್ಟೋರ್‌ಗಳು ಸಾರ್ವಜನಿಕರಿಗೆ ಲಭ್ಯವಿರುತ್ತವೆ. ಪೆಟ್ರೋಲ್‌ಬಂಕ್, ಸಾರಿಗೆ ಸಂಚಾರ, ಬ್ಯಾಂಕ್, ಅಂಚೆ ಮತ್ತು ಸರ್ಕಾರಿ ಕಚೇರಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸಲಿವೆ.