ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕರೊನಾ ಪಾಸಿಟಿವಿಟಿ ರೇಟ್ ಹೆಚ್ಚಳವಾಗುತ್ತಿರುವುದರಿಂದ ಸೋಂಕು ನಿಯಂತ್ರಣಕ್ಕೆ ತರಲು ಗ್ರಾಮಗಳನ್ನು ಸೀಲ್‌ಡೌನ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ತಾಲೂಕು ಆಸ್ಪತ್ರೆಯ ವಾರ್ ರೂಮ್‌ಗೆ ಭಾನುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ, ಹುಕ್ಕೇರಿ, ಅಥಣಿ, ಚಿಕ್ಕೋಡಿ,ಅಥಣಿ, ರಾಯಬಾಗ ತಾಲೂಕಿನಲ್ಲಿ ಹೆಚ್ಚಿರುವ ಪಾಸಿಟಿವಿಟಿ ರೇಟ್ ಕಡಿಮೆ ಮಾಡಲು ಸೀಲ್‌ಡೌನ್ ಅನಿವಾರ್ಯವಾಗಿದೆ. 5 ಕ್ಕಿಂತ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದರೆ ಆ ಗ್ರಾಮ ಹಾಗೂ ಪಟ್ಟಣ ಪ್ರದೇಶದಲ್ಲಿ ಓಣಿಯನ್ನೇ ಸೀಲ್ ಡೌನ್ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಚಿಕ್ಕೋಡಿ ತಾಲೂಕಿನಲ್ಲಿ ಈಗಾಗಲೇ 8 ಹಳ್ಳಿಗಳನ್ನು ಸಂಪೂರ್ಣ ಸೀಲ್‌ಡೌನ್ ಮಾಡಿದ್ದು, 5ಕ್ಕಿಂತ ಹೆಚ್ಚು ಪ್ರಕರಣಗಳಿರುವ ಚಿಕ್ಕೋಡಿ ಪಟ್ಟಣದ ಓಣಿಗಳಿಗೆ, ತಾಲೂಕಿನ ಪಾಂಗೀರ ಗ್ರಾಮಕ್ಕೆ ಖುದ್ದು ಭೇಟಿ ನೀಡಿದ್ದೇನೆ ಎಂದರು. ಚಿಕ್ಕೋಡಿಯಲ್ಲಿ ಕೋವಿಡ್ ಪರೀಕ್ಷಾ ಕೇಂದ್ರದ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಇನ್ನೊಂದು ವಾರದಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಪ್ರಾರಂಭವಾಗಲಿದೆ. ಚಿಕ್ಕೋಡಿ, ಅಥಣಿ ರಾಯಭಾಗ, ಕಾಗವಾಡ ತಾಲೂಕಿನ ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಇಲ್ಲೇ ಆಗಲಿದೆ. ಇದರಿಂದ ಜನರಿಗೆ ಬೇಗ ಫಲಿತಾಂಶ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದರು.
ಆರ್‌ಟಿಪಿಸಿಆರ್ ವರದಿ ಕಡ್ಡಾಯ: ಕರ್ನಾಟಕದ ಗಡಿ ಪ್ರವೇಶ ಮಾಡುವ ಅನ್ಯ ರಾಜ್ಯದವರಿಗೆ ಆರ್‌ಟಿಪಿಸಿಆರ್ ವರದಿ ಕಡ್ಡಾಯ. ಈ ಕುರಿತು ಮತ್ತೊಮ್ಮೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಜಿಲ್ಲಾಧಿಕಾರಿ ಹಿರೇಮಠ ಮಾಹಿತಿ ನೀಡಿದರು. ತಹಸೀಲ್ದಾರ್ ಪ್ರವೀಣ ಜೈನ, ಎಡಿಎಚ್‌ಒ
ಡಾ.ಎಸ್.ಎಸ್.ಗಡಾದ, ತಾಲೂಕು ವೈದ್ಯಾಧಿಕಾರಿ ಡಾ.ವಿಠ್ಠಲ ಶಿಂಧೆ, ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿ ಡಾ.ಸುಂದರ ರೋಗಿ, ಲೋಕೋಪಯೋಗಿ ಅಭಿಯಂತ ಎಸ್.ಎಸ್.ಬೇಡಕಿಹಾಳೆ ಉಪಸ್ಥಿತರಿದ್ದರು.