ಜಿಲ್ಲೆ

ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ, ಬಾಲಾಜಿ ಆಸ್ಪತ್ರೆಯ ಡಾ. ಕ್ರಾಂತಿಕಿರಣ ಸಲಹೆ

ಹುಬ್ಬಳ್ಳಿ: ಎಚ್​ಐವಿ ಸೋಂಕಿತ ವ್ಯಕ್ತಿಗಳಿಗೂ ಎಲ್ಲರಂತೆ ಬದುಕುವ ಹಕ್ಕಿದೆ. ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ನೆಮ್ಮದಿಯ ಜೀವನ ಸಾಗಿಸುವಂತೆ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಬಾಲಾಜಿ ಆಸ್ಪತ್ರೆಯ ಚೇರ್ಮನ್ ಡಾ. ಕ್ರಾಂತಿಕಿರಣ ಹೇಳಿದರು.

ನಗರದ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೀವನ್ಮುಖಿ ಸಂಘದ ಮಕ್ಕಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಏಡ್ಸ್ ರೋಗಕ್ಕಿಂತ ಅದರ ಭಯವೇ ರೋಗಿಯ ಮಾನಸಿಕ ಸ್ಥೈರ್ಯ ಕುಗ್ಗುವಂತೆ ಮಾಡುತ್ತಿದ್ದು, ರೋಗದ ಬಗ್ಗೆ ಜನಜಾಗೃತಿ ಮೂಡಿಸಬೇಕು. ಸೋಂಕಿತರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದರು.

ಎಚ್​ಐವಿ ಸೋಂಕಿತರು ವೈದ್ಯರ ಸಲಹೆಯಂತೆ ಪೌಷ್ಠಿಕ ಆಹಾರ ಸೇವನೆ, ಉತ್ತಮ ಜೀವನಕ್ರಮ, ಮನೋಬಲ ಹೆಚ್ಚಿಸುವ ಕಾರ್ಯಚಟುವಟಿಕೆಗಳಿಂದ ನೆಮ್ಮದಿಯ ಬದುಕು ಸಾಗಿಸಬಹುದು ಎಂದು ತಿಳಿಸಿದರು.

ಕೆ.ಎನ್.ಪಿ ಪ್ಲಸ್ ಆರೋಗ್ಯ ಕಾರ್ಯಕರ್ತೆ ನಿರ್ಮಲಾ ಹೆಬ್ಬಳ್ಳಿ ಮಾತನಾಡಿ, ಎಚ್​ಐವಿ ಸೋಂಕಿತರಿಗೆ ಸಾಮಾಜಿಕ ಸವಲತ್ತುಗಳನ್ನು ಒದಗಿಸುವಲ್ಲಿ ಹಾಗೂ ಅವರ ಜೀವನಮಟ್ಟ ಸುಧಾರಣೆಗಾಗಿ ಜೀವನ್ಮುಖಿ ಸಂಘವು ಕಳೆದ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತ ಬಂದಿದೆ. ಸೋಂಕಿತರ ಹಕ್ಕುಗಳಿಗಾಗಿ ಹಾಗೂ ಸರ್ಕಾರಿ ಸೌಲಭ್ಯಗಳಿಗಾಗಿ ಹೋರಾಡುತ್ತ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರದಿಂದ ಉಚಿತ ಔಷಧಿ, ಪೌಷ್ಠಿಕ ಆಹಾರ ದೊರಕಿಸಲು ಅವಿರತ ಶ್ರಮಿಸುತ್ತಿದೆ ಎಂದು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು.

ಜೀವನ್ಮುಖಿ ಸಂಘದ ಅಧ್ಯಕ್ಷ ಶಿವಪ್ಪ ಗುಂಜಾಳ, ಕಾರ್ಯದರ್ಶಿ ಸುದರ್ಶನ ಮಳಗಿ, ಕೆಎನ್​ಪಿ ಪ್ಲಸ್​ನ ಕಾರ್ಯಕ್ರಮ ಸಂಯೋಜಕಿ ಅನ್ನಪೂರ್ಣ ಕುಂಬಾರ, ಸುಂದರ ಮಲ್ಲೂರ, ಇತರರು ಇದ್ದರು.

20ಕ್ಕೂ ಹೆಚ್ಚು ಮಕ್ಕಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಿಸಲಾಯಿತು.