ಆನೇಕಲ್: ಬೆಂಗಳೂರು ನಗರ ಹಾಗೂ ಸುತ್ತಮುತ್ತ ಕರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಸೂಕ್ತ ಚಿಕಿತ್ಸೆ, ಆಕ್ಸಿಜನ್ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಖಾಸಗಿ ಸಂಸ್ಥೆ ಸಹಕಾರ ನೀಡಿದರೆ ಕರೊನಾ ಸೋಂಕಿತರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ಅಭಿಪ್ರಾಯಪಟ್ಟರು.
ಚಂದಾಪುರದ ಸನ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ನಿರ್ಮಿಸಲಾದ ಕೋವಿಡ್ ಕೇರ್ ಸೆಂಟರ್‌ಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಸ್ವಾರ್ಥವಿಲ್ಲದೆ ಕೋವಿಡ್ ಕೇರ್ ತೆರೆಯಲು ಕಲ್ಯಾಣ ಮಂಟಪ ಮಾಲೀಕ ನಾಗರಾಜು ಹಾಗೂ ಜಿಗಣಿಯ ಎನಬಲರ್ಸ್ ಸಂಸ್ಥೆ ಸಹಕಾರ ಶ್ಲಾಘನೀಯ ಎಂದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ನೆರಳೂರು ನಾಗರಾಜು ಕಲ್ಯಾಣ ಮಂಟಪವನ್ನು ಕೋವಿಡ್ ಸೆಂಟರ್ ನಿರ್ಮಾಣಕ್ಕೆ ನೀಡಿದ್ದು, ಇದು ತುರ್ತು ಪರಿಸ್ಥಿತಿ ಸಂದರ್ಭ. ಎಲ್ಲರಿಗೂ ಬೆಡ್ ಸಿಗುವ ವ್ಯವಸ್ಥೆ ಆಗಬೇಕಿದೆ ಎಂದರು.
ಕಲ್ಯಾಣ ಮಂಟಪ ಮಾಲೀಕ ನಾಗರಾಜು ಮಾತನಾಡಿ, ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೇ. ಸೋಂಕಿಗೆ ತುತ್ತಾದ ಕೆಲವರಿಗೆ ಮನೆಯಲ್ಲಿ ಐಸೋಲೇಷನ್ ಆಗಲು ವ್ಯವಸ್ಥೆ ಇರುವುದಿಲ್ಲ.ಅಂತಹವರಿಗಾಗಿ ಕಲ್ಯಾಣ ಮಂಟಪದಲ್ಲಿ ಆಕ್ಸಿಜನ್ ಕಾನ್ಸನ್ಟರೇಟರ್ ವ್ಯವಸ್ಥೆ ಇರುವ 60 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಸಜ್ಜುಗೊಳಿಸಲಾಗಿದೆ ಎಂದರು.
ಎನಬಲರ್ಸ್ ಯುನೈಟೆಡ್ ಸಂಸ್ಥೆ ಸೇರಿ ಹಲವು ಸಂಘ ಸಂಸ್ಥೆಗಳು ಹಾಗೂ ಸ್ವಯಂ ಸೇವಕರ ಸಹಭಾಗಿತ್ವದಲ್ಲಿ ಸೆಂಟರ್ ಸಿದ್ಧ ಪಡಿಸಲಾಗಿದೆ ಎಂದು ತಿಳಿಸಿದರು.
ಎನಬಲರ್ಸ್ ಸಂಸ್ಥೆ ಸಿಬ್ಬಂದಿ ಅಶ್ವಿನ್ ಮಾತನಾಡಿ, ಕಳೆದ ವರ್ಷ ಸಾವಿರಾರು ಜನರಿಗೆ ಆಹಾರ ಸಾಮಗ್ರಿ ನೀಡಿದ್ದೇವೆ. ಈ ಬಾರಿ ಈಗಾಗಲೇ ಜಿಗಣಿಯಲ್ಲಿ ಕರೊನಾ ಕೇರ್ ಸೆಂಟರ್ ತೆರೆದು ಸೇವೆ ಸಲ್ಲಿಸುತ್ತಿದ್ದೇವೆ, ಈಗ ಆನೇಕಲ್‌ನಲ್ಲಿಯೂ ನೂರು ಬೆಡ್ ಜತೆಗೆ ಆಕ್ಸಿಜನ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ ಎಂದರು.
ಸಂಸದ ಡಿ.ಕೆ.ಸುರೇಶ್, ಐಜಿಪಿ ಚಂದ್ರಶೇಖರ್, ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್, ತಾಲೂಕು ಆರೋಗ್ಯ ಅಧಿಕಾರಿ ಡಾ. ವಿನಯ್ ಕುಮಾರ್, ಡಿವೈಎಸ್ಪಿ ಮಹದೇವಪ್ಪ, ತಹಸೀಲ್ದಾರ್ ದಿನೇಶ್, ಅತ್ತಿಬೆಲೆ ವೃತ್ತ ನಿರೀಕ್ಷಕ ಕೆ.ವಿಶ್ವನಾಥ್, ಎನಬಲರ್ಸ್ ಯುನೈಟೈಡ್‌ನ ಸದಸ್ಯರಾದ ಚೇತನ್, ಗಿರೀಶ್, ಪ್ರವೀಣ್,ನಾಗರಾಜು ಇದ್ದರು.