ಜಿಲ್ಲೆ

ಸೋಂಕಿತರ ಆರೈಕೆಯಲ್ಲಿ ಲೋಪವಾಗಬಾರದು, ಜಿಲ್ಲಾಧಿಕಾರಿ ಶ್ರೀನಿವಾಸ್ ಸೂಚನೆ, ಬೈರಾಪುರದ ಕೋವಿಡ್ ಕೇರ್ ಸೆಂಟರ್ ಪರಿಶೀಲನೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇವನಹಳ್ಳಿ ತಾಲೂಕಿನ ಬೈರಾಪುರ ಗ್ರಾಮದಲ್ಲಿರುವ ಇಂದಿರಾ ಗಾಂಧಿ ಹಾಸ್ಟೆಲ್‌ನ 250 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‌ಗೆ ಗುರುವಾರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಭೇಟಿ ನೀಡಿ, ಪರಿಶೀಲಿಸಿದರು. ಸೆಂಟರ್‌ನಲ್ಲಿ ಅಳವಡಿಸಿರುವ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆ ಹಾಕಿದರು.

ಕೋವಿಡ್ ಕೇರ್ ಸೆಂಟರ್‌ನಲ್ಲಿರುವ 250 ಹಾಸಿಗೆಗಳ ಪೈಕಿ 37 ಹಾಸಿಗೆಗಳಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯ ಹೆಚ್ಚಿಸಲು ಕ್ರಮವಹಿಸಲಾಗುವುದು. ಯಾವುದೇ ಸೋಂಕಿತ ವ್ಯಕ್ತಿಗೆ ಆಕ್ಸಿಜನ್ ಕೊರತೆಯಾಗದಂತೆ ಉಸ್ತುವಾರಿ ಅಧಿಕಾರಿ ಮತ್ತು ಸಿಬ್ಬಂದಿ ಎಚ್ಚರವಹಿಸಬೇಕು ಎಂದು ತಿಳಿಸಿದರು.

ಕೋವಿಡ್ ಸೋಂಕಿತರ ಆರೈಕೆಯಲ್ಲಿ ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಪೌಷ್ಟಿಕ ಆಹಾರ, ಕುಡಿಯಲು ಬಿಸಿ ನೀರು ಪೂರೈಸುವ ಜತೆಯಲ್ಲಿ ಸ್ಥಾನದ ಕೊಠಡಿ ಮತ್ತು ಶೌಚಗೃಹ ನಿರಂತರವಾಗಿ ಸ್ವಚ್ಛಗೊಳಿಸಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಅರುಳು ಕುಮಾರ್, ದೇವನಹಳ್ಳಿ ತಹಸೀಲ್ದಾರ್ ಅನಿಲ್ ಕುಮಾರ್ ಅರೋಳೀಕರ್ ಇದ್ದರು.