ಹುಬ್ಬಳ್ಳಿ: ಭಾರತೀಯ ರೈಲ್ವೆ 2021-22ರೊಳಗಾಗಿ ಎಲ್ಲ ರೈಲ್ವೆ ವಲಯ ಹಾಗೂ ಇತರ ಉತ್ಪಾದನಾ ಘಟಕಗಳಿಂದ ಅಂದಾಜು 1 ಸಾವಿರ ಮೆಗಾವಾಟ್ ಸೋಲಾರ್ ವಿದ್ಯುತ್ಶಕ್ತಿ ಹಾಗೂ 200 ಮೆ.ವಾ. ಪವನ ವಿದ್ಯುತ್ ಶಕ್ತಿ ಉತ್ಪಾದಿಸುವ ಗುರಿ ಹೊಂದಿದೆ.
ಈ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ, ಕಚೇರಿಗಳ ಕಟ್ಟಡಗಳ ಮೇಲೆ 500 ಮೆವಾನ ಸೋಲಾರ್ ಸ್ಥಾವರಗಳನ್ನು ಅಳವಡಿಸಲಾಗುತ್ತಿದೆ.
ನೈಋತ್ಯ ರೈಲ್ವೆ ವಲಯವೂ ನೈಸರ್ಗಿಕ ವಿದ್ಯುತ್ ಶಕ್ತಿ ಬಳಸಿಕೊಳ್ಳುವ ಮೂಲಕ ಇಂಧನ ಸಂರಕ್ಷಣೆಗೆ ಪ್ರಮುಖ ಹೆಜ್ಜೆ ಇಟ್ಟಿದೆ. ರೈಲ್ವೆ ನಿಲ್ದಾಣ, ಕಚೇರಿಗಳಲ್ಲಿ ಸೋಲಾರ್ ಸ್ಥಾವರಗಳನ್ನು ಅಳವಡಿಸುವ ಮೂಲಕ ವೆಚ್ಚ ತಗ್ಗಿಸುವ ಕಾರ್ಯಕ್ಕೆ ನೈಋತ್ಯ ರೈಲ್ವೆ ಮುಂದಾಗಿದೆ.
ವಲಯದ ವಿವಿಧೆಡೆ 4.37 ಎಂಡಬ್ಲ್ಯುಪಿ ಮತ್ತು 165 ಕೆಡಬ್ಲ್ಯುಪಿ ಸಾಮರ್ಥ್ಯದ ಸೋಲಾರ್ ಸ್ಥಾವರಗಳನ್ನು ಅಳವಡಿಸಲಾಗಿದೆ. ಹುಬ್ಬಳ್ಳಿ, ಕೆಎಸ್ಆರ್ ಬೆಂಗಳೂರು, ಮೈಸೂರು, ಯಶವಂತಪುರ, ಹೊಸಪೇಟೆ, ಗದಗ, ಬಳ್ಳಾರಿ ಸೇರಿದಂತೆ ಪ್ರಮುಖ ರೈಲ್ವೆ ನಿಲ್ದಾಣಗಳು ಮತ್ತು ರೈಲ್ ಸೌಧ, ಸೆಂಟ್ರಲ್ ವಿಂಗ್, ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ, ಹುಬ್ಬಳ್ಳಿ ಮತ್ತು ಬೆಂಗಳೂರಿನ ರೈಲ್ವೆ ಆಸ್ಪತ್ರೆ, ಬೆಂಗಳೂರಿನ ಪಾರ್ಸಲ್ ಕಚೇರಿಯ ಮೇಲ್ಛಾವಣಿಯಲ್ಲಿ ಸೋಲಾರ್ ಸ್ಥಾವರಗಳನ್ನು ಅಳವಡಿಸಲಾಗಿದೆ.
ರೈಲ್ವೆ ವರ್ಕ್ಶಾಪ್ ಮತ್ತು ಶೆಡ್ಸ್ಗಳಲ್ಲಿಯೂ ಸೋಲಾರ್ ಮೇಲ್ಛಾವಣಿ ಸ್ಥಾವರಗಳನ್ನು ಅಳವಡಿಸಲಾಗಿದೆ. 221 ಲೆವೆಲ್ ಕ್ರಾಸಿಂಗ್ಸ್ನಲ್ಲಿ ಸೋಲಾರ್ ಲೈಟ್ಗಳನ್ನು ಅಳವಡಿಸಿದೆ. ಕಳೆದ 4 ವರ್ಷಗಳಲ್ಲಿ 4.4 ಮಿಲಿಯನ್ ಯುನಿಟ್ಸ್ ಸೋಲಾರ್ ವಿದ್ಯುತ್ ಶಕ್ತಿ ಉತ್ಪಾದಿಸಿದೆ. ಸೋಲಾರ್ ವಿದ್ಯುತ್ ಉತ್ಪಾದನೆಯಿಂದಾಗಿ ಕಳೆದ ವರ್ಷ ನೈಋತ್ಯ ರೈಲ್ವೆ ವಲಯಕ್ಕೆ ಅಂದಾಜು 1.78 ಕೋಟಿ ರೂ. ಉಳಿತಾಯವಾಗಿದ್ದು, ಈ ಆರ್ಥಿಕ ವರ್ಷದಲ್ಲಿ 1.88 ಕೋಟಿ ರೂ. ಉಳಿತಾಯವಾಗುವ ನಿರೀಕ್ಷೆ ಇದೆ.
ಇದರೊಂದಿಗೆ ನೈಋತ್ಯ ರೈಲ್ವೆ ವಲಯ ಹಳಿಗಳ ಪಕ್ಕದ ಜಾಗದಲ್ಲಿ ಮತ್ತು ರೈಲ್ವೆ ಇಲಾಖೆ ಸ್ವಾಧೀನದ ಖಾಲಿ ಜಾಗದಲ್ಲಿಯೂ ಸೋಲಾರ್ ಸ್ಥಾವರ ಸ್ಥಾಪಿಸುವ ಯೋಜನೆ ಹೊಂದಿದೆ. 20 ಎಂಡಬ್ಲ್ಯುಪಿ ಸೋಲಾರ್ ಸ್ಥಾವರವನ್ನು ಖಾಲಿ ಜಾಗದಲ್ಲಿ ಹಾಗೂ 8.3 ಎಂಡಬ್ಲ್ಯುಪಿ ಸೋಲಾರ್ ಸ್ಥಾವರ ಸ್ಥಾಪಿಸುವುದಕ್ಕಾಗಿ ರೈಲ್ ಎನರ್ಜಿ ಮ್ಯಾನೇಜ್ವೆುಂಟ್ ಕಂ.ಲಿ. ಟೆಂಡರ್ಅನ್ನೂ ಕರೆದಿದೆ. ಹೆಚ್ಚುವರಿಯಾಗಿ 98 ಎಂಡಬ್ಲ್ಯುಪಿ ಸೋಲಾರ್ ಸ್ಥಾವರಗಳ ಸ್ಥಾಪನೆಗೆ ಜಾಗ ಗುರುತಿಸುವ ಕಾರ್ಯವೂ ನಡೆದಿದೆ ಎಂದು ಪ್ರಕಟಣೆ ತಿಳಿಸಿದೆ.