ಜಿಲ್ಲೆ

ಸೋಮವಾರವೂ ಮುಂದುವರಿಯಲಿದೆ ಸಮೀಕ್ಷೆ

ಗೋಕರ್ಣ: ಕರೊನಾ ಆತಂಕದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ವಿದೇಶಿ ಪ್ರವಾಸಿಗರ ಆರೋಗ್ಯ ತಪಾಸಣೆ ಮಾಡಿದರು.

ವಿದೇಶಿಯರು ವಾಸಿಸುವ ವಸತಿ ಗೃಹ, ಹೋಟೆಲ್, ರೆಸಾರ್ಟ್​ಗಳು ಮತ್ತು ಎಲ್ಲ ಬೀಚ್​ಗಳಿಗೆ ತೆರಳಿ ವಿದೇಶಿಯರನ್ನು ಸಂರ್ಪಸಿ ಅಗತ್ಯ ಮಾಹಿತಿ ಕಲೆ ಹಾಕಿದರು. ಕರೊನಾ ಬಗ್ಗೆ ಆತಂಕ ಪಡುವಂತಹ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಒಟ್ಟು 800 ವಿದೇಶಿ ಪ್ರವಾಸಿಗರನ್ನು ಮತ್ತು 2200 ಮನೆ, ವಸತಿ ಗೃಹ, ರೆಸಾರ್ಟ್​ಗಳನ್ನು ಸಂರ್ಪಸಲಾಯಿತು. ಹತ್ತಿರದ ದುಬ್ಬನಶಿ, ಗಂಗಾವಳಿ ಮುಂತಾದ ಗ್ರಾಮೀಣ ಪ್ರದೇಶಗಳಲ್ಲೂ ವಿದೇಶಿಯರು ವಾಸಿಸುತ್ತಿದ್ದು, ಸೋಮವಾರ ಸಮೀಕ್ಷೆ ಮುಂದುವರಿಯಲಿದೆ. ಸದ್ಯ ಗೋಕರ್ಣದಲ್ಲಿ ವಾಸಿಸುವ ಹೆಚ್ಚಿನ ವಿದೇಶಿಯರು ಎರಡು ಮೂರು ತಿಂಗಳ ಹಿಂದೆಯೇ ಇಲ್ಲಿಗೆ ಬಂದವರಾಗಿದ್ದಾರೆ. ಹೀಗಾಗಿ ಕರೊನಾ ಕುರಿತಾದ ಹೆಚ್ಚಿನ ಭೀತಿ ದೂರಾದಂತಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕಕುಮಾರ ಮಾತನಾಡಿ, ಗೋಕರ್ಣ ಸೇರಿ ಜಿಲ್ಲೆಯಲ್ಲಿ ಕರೊನಾ ವೈರಸ್ ಕುರಿತು ಭಯ ಪಡುವ ಯಾವುದೇ ವಾತಾವರಣ ಇಲ್ಲ. ಗೋಕರ್ಣದಲ್ಲಿ ರೋಗದ ಯಾವುದೇ ಲಕ್ಷಣ ಕಂಡು ಬಂದಿಲ್ಲ. ವಿದೇಶಿ ಪ್ರವಾಸಿಗರನ್ನು ಆಧರಿಸಿ ಗೋಕರ್ಣ ಭಾಗದಲ್ಲಿ ಸಮೀಕ್ಷೆ ಮುಂದುವರಿಯಲಿದೆ. ಈ ಭಾಗದಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸುವ ಬಗ್ಗೆ ಕೇಳಿ ಬಂದಿದೆ. ಆದರೆ ಕಡ್ಡಾಯ ಸರಿಯಲ್ಲ ಮತ್ತು ಅಗತ್ಯವೂ ಇಲ್ಲ ಎಂದರು.

ಸಮೀಕ್ಷೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಸ್ಥಳೀಯ ಆರೋಗ್ಯಾಧಿಕಾರಿ ಡಾ.ಜಗದೀಶ ನಾಯ್ಕ ಮತ್ತು ಇಲಾಖೆಯ 50 ಸಿಬ್ಬಂದಿ ಪಾಲ್ಗೊಂಡಿದ್ದರು.

ಟಿಬೇಟಿಯನ್ ಕಾಲನಿಯಲ್ಲಿ ಕರೊನಾ ಜಾಗೃತಿ

ಮುಂಡಗೋಡ: ಆರೋಗ್ಯ ಇಲಾಖೆ ಮತ್ತು ಟಿಬೇಟಿಯನ್ ಕಾಲನಿಯ ಡಿಟಿಆರ್ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಟಿಬೇಟಿಯನ್ ಕಾಲನಿಯಲ್ಲಿ ಕರೊನಾ ವೈರಸ್ ಕುರಿತು ಸಮೀಕ್ಷೆ ನಡೆಸಿ ಜಾಗೃತಿ ಮೂಡಿಸಲಾಯಿತು. 9 ಕ್ಯಾಂಪ್​ಗಳಲ್ಲಿ 16 ತಂಡ ರಚಿಸಿ ಒಂದು ತಂಡದಲ್ಲಿ ಒಬ್ಬ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಒಬ್ಬ ಆಶಾ ಕಾರ್ಯಕರ್ತೆ ಮತ್ತು ಆ ಕ್ಯಾಂಪ್​ಗೆ ಸಂಬಂಧಪಟ್ಟ ವ್ಯಕ್ತಿ ಸೇರಿ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿದರು.