ಜಿಲ್ಲೆ

ಸೋಂಕು ತಡೆಯುವಲ್ಲಿ ಎಡವಿದ ಚೆಕ್​ಪೋಸ್ಟ್ ?

ಹಾವೇರಿ: ಲಾಕ್​ಡೌನ್ 2.0 ಮುಕ್ತಾಯವಾಗುವವರೆಗೂ ಹಸಿರುವಲಯದಲ್ಲಿದ್ದ ಜಿಲ್ಲೆಯಲ್ಲಿ ಕರೊನಾ ಸೋಂಕು ಅಂಟಲು ಚೆಕ್ ಪೋಸ್ಟ್ ನಿರ್ಲಕ್ಷ್ಯ ಕಾರಣವಾಯಿತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಕಳೆದ ಸೋಮವಾರ ಪತ್ತೆಯಾದ ಮೊದಲ ಪ್ರಕರಣ ಚೆಕ್​ಪೋಸ್ಟ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಮುಂಬೈನಿಂದ ಬಂದವರಲ್ಲಿ ಕಂಡುಬಂದಿತ್ತು. ಜಿಲ್ಲೆಯ ಗಡಿಭಾಗದಲ್ಲಿ ಹಾಕಿರುವ ಚೆಕ್​ಪೋಸ್ಟ್​ನಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆದಿದ್ದರೆ, ಮುಂಬೈನಿಂದ ಲಾರಿಯಲ್ಲಿ ಬಂದ ಸೋಂಕಿತರಿಬ್ಬರು ಜಿಲ್ಲೆಯೊಳಗೆ ಪ್ರವೇಶ ಮಾಡಲು ಆಗುತ್ತಿರಲಿಲ್ಲ. ಪರವಾನಗಿ ಪಡೆದುಕೊಂಡು ಸಂಚರಿಸುವ ಲಾರಿಗಳಲ್ಲಿಯೂ ಚಾಲಕ, ಕ್ಲೀನರ್ ಹಾಗೂ ಓರ್ವ ಮಾಲೀಕನಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದೆ. ಪ್ರತಿ ಚೆಕ್​ಪೋಸ್ಟ್​ನಲ್ಲಿಯೂ ಇದನ್ನು ಪರಿಶೀಲಿಸಿಯೇ ವಾಹನಗಳನ್ನು ಬಿಡಲಾಗುತ್ತದೆ. ಆದರೆ, ಇಲ್ಲಿ ಚೆಕ್​ಪೋಸ್ಟ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮುಂಬೈನಲ್ಲಿ ಕಟ್ಟಡ ಕಾರ್ವಿುಕ ಕೆಲಸ ಮಾಡುತ್ತಿದ್ದ ಮೂವರು ಲಾರಿಯ ಮೂಲಕ ಸವಣೂರು ತಲುಪಿದ್ದಾರೆ. ಹಾವೇರಿ ಜಿಲ್ಲೆಯಷ್ಟೇ ಅಲ್ಲದೆ, ಬೆಳಗಾವಿ, ಧಾರವಾಡ ಜಿಲ್ಲೆಯ ಗಡಿಭಾಗದ ಚೆಕ್​ಪೋಸ್ಟ್ ಸಿಬ್ಬಂದಿಯೂ ಲಾರಿಯನ್ನು ಸರಿಯಾಗಿ ಪರಿಶೀಲನೆ ಮಾಡದೇ ಬಿಟ್ಟಿದ್ದಾರೆ. ಚೆಕ್​ಪೋಸ್ಟ್​ನಲ್ಲಿ ಸರಿಯಾಗಿ ಪರಿಶೀಲಿಸಿದ್ದರೆ ಮೊದಲೆರಡು ಪಾಸಿಟಿವ್ ಬಂದವರು ಸವಣೂರ ಪ್ರವೇಶಿಸುವ ಮುನ್ನವೇ ಸಿಕ್ಕು, ಕ್ವಾರಂಟೈನ್​ಗೆ ಒಳಗಾಗುತ್ತಿದ್ದರು. ಇದರಿಂದ ಸವಣೂರಿನ ಎಸ್​ಎಂ ಕೃಷ್ಣ ಬಡಾವಣೆಯನ್ನು ಸೀಲ್​ಡೌನ್ ಮಾಡಿ ಸುತ್ತ 7ಕಿಮೀ ವ್ಯಾಪ್ತಿಯಲ್ಲಿ ಬಫರ್​ಜೋನ್ ಘೋಷಿಸುವ ಅವಶ್ಯಕತೆ ಬರುತ್ತಿರಲಿಲ್ಲ.

3ನೇ ಸೋಂಕಿತನ ಟ್ರಾವೆಲ್ ಹಿಸ್ಟರಿ: ಸೋಮವಾರ ಜಿಲ್ಲೆಯ ಶಿಗ್ಗಾಂವಿ ತಾಲೂಕು ಅಂದಲಗಿಯಲ್ಲಿ ಪತ್ತೆಯಾಗಿರುವ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಜಿಲ್ಲೆಯ ಶಿಗ್ಗಾಂವಿ, ಹಾನಗಲ್ಲ ತಾಲೂಕಷ್ಟೆ ಅಲ್ಲದೆ, ಅಕ್ಕಪಕ್ಕದ ಜಿಲ್ಲೆಗಳ ಜನರನ್ನೂ ಬೆಚ್ಚಿ ಬೀಳಿಸಿದೆ. ರೈತರ ಬೆಳೆ ಸಾಗಿಸಲು ಯಾವುದೇ ಅಡೆತಡೆಯಿಲ್ಲ ಎಂಬ ಮಾನದಂಡವನ್ನು ಅಸ್ತ್ರವನ್ನಾಗಿಸಿಕೊಂಡ ಈ ವ್ಯಕ್ತಿ 7 ದಿನಗಳ ಅವಧಿಯಲ್ಲಿ ಮೂರು ಬಾರಿ ಜಿಲ್ಲೆಯಿಂದ ನವಿಮುಂಬೈಗೆ ಹೋಗಿ ಬಂದಿದ್ದಾನೆ. ಏ. 23, ಏ. 26, ಏ. 29 ಹೀಗೆ ಒಟ್ಟು 3 ಬಾರಿ ತನ್ನದೇ ಮಿನಿಲಾರಿಯನ್ನು ಚಾಲನೆ ಮಾಡಿಕೊಂಡು ನವಿಮುಂಬೈನ ವಾಸಿ ಎಪಿಎಂಸಿಗೆ ಹೋಗಿ ಮಾವಿನಕಾಯಿ ಇಳಿಸಿ ಬಂದಿದ್ದಾನೆ. ತನ್ನೊಂದಿಗೆ ಸಹೋದರ ಹಾಗೂ ಮೂವರು ಕ್ಲೀನರ್​ಗಳನ್ನು ಕರೆದುಕೊಂಡು ಹೋಗಿದ್ದ.

ಹಣ್ಣು ಖರೀದಿಗೆ ಸಿಕ್ಕಾಪಟ್ಟೆ ಸಂಚಾರ: ಮೊದಲ ಬಾರಿಗೆ ಏ. 23ರಂದು ಅಂದಲಗಿಯಿಂದ ಕೊಪ್ಪರಸಿಕೊಪ್ಪ, ಬೈಲವಾಳ, ಬಸಾಪುರ, ದುಂಡಶಿ, ಹುಬ್ಬಳ್ಳಿ ಎವರ್​ಗ್ರೀನ್ ದಾಬಾ, ಧಾರವಾಡ, ಬೆಳಗಾವಿ, ಕೊಲ್ಲಾಪುರ, ವಾಲ್ವಾ ಮಾರ್ಗವಾಗಿ ಮುಂಬೈ ತಲುಪಿದ್ದಾನೆ. ಅಲ್ಲಿ ವಾಸಿ ಎಪಿಎಂಸಿಯಲ್ಲಿನ ನವಿಮುಂಬೈ ಪೋರ್ಟ್ ಆಂಡ್ ವೆಜಿಟೆಬಲ್ ಮಾರ್ಕೆಟ್​ನಲ್ಲಿ ಮಾವಿನಕಾಯಿ ಇಳಿಸಿ ಏ. 25ಕ್ಕೆ ಮರಳಿ ಬಂದಿದ್ದಾನೆ.

ಪುನಃ ಏ. 26ರಂದು ಅಂದಲಗಿಯಿಂದ ಕೋಣನಕೆರೆ, ಹೊಸೂರ, ಹುಬ್ಬಳ್ಳಿ, ಕಿತ್ತೂರ, ಬೆಳಗಾವಿ, ಕೊಲ್ಲಾಪುರ, ಪುಣೆ ಮಾರ್ಗವಾಗಿ ಮುಂಬೈಗೆ ಹೋಗಿ ಮರಳಿ ಬಂದಿದ್ದಾನೆ. ಏ. 29ರಂದು 3ನೇ ಬಾರಿಗೆ ಮುಂಬೈಗೆ ಹೋಗಿ ಮೇ 1ರಂದು ಮರಳಿ ಬಂದಿದ್ದಾನೆ. ನಂತರ ಮಾವಿನಕಾಯಿ ಖರೀದಿಗಾಗಿ ಜಿಲ್ಲೆಯ ಹಾನಗಲ್ಲ ಪಟ್ಟಣ ಹಾಗೂ ತಾಲೂಕಿನ ಹನುಮಸಾಗರ, ಶಡಗರವಳ್ಳಿ, ಬೈಲವಾಳ, ಕೊಪ್ಪರಸಿಕೊಪ್ಪ, ಶಿರಗೋಡ, ಗಿರಿಸಿನಕೊಪ್ಪ, ಯಳ್ಳೂರ, ಯಳವಟ್ಟಿಯಲ್ಲಿ ಸಂಚರಿಸಿದ್ದಾನೆ. ಇದೀಗ ಹಾನಗಲ್ಲ ತಾಲೂಕಿನ ಈ ಗ್ರಾಮಗಳಲ್ಲಿಯೂ ಸೋಂಕು ಹರಡಿರುವ ಭೀತಿ ಎದುರಾಗಿದೆ.

ಮೇ 6ಕ್ಕೆ ಸ್ಥಳೀಯರಿಂದ ಮಾಹಿತಿ: ಒಂದು ವಾರದ ಅವಧಿಯಲ್ಲಿ 3 ಬಾರಿ ಮುಂಬೈಗೆ ಹೋಗಿ ಬಂದಿದ್ದರೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮೇ 6ರಂದು ಸ್ಥಳೀಯರು ಈ ವ್ಯಕ್ತಿ ಮುಂಬೈಗೆ ಹೋಗಿ ಬಂದಿರುವ ಮಾಹಿತಿ ನೀಡಿದ್ದಾರೆ. ಅದರ ಆಧಾರದ ಮೇಲೆ ಶಿಗ್ಗಾಂವಿ ಆರ್​ಬಿಎಸ್​ಕೆ ವೈದ್ಯಾಧಿಕಾರಿ ಗೈಬುಸಾಬ ನಾಯ್ಕರ, ಕೋಣನಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಪೊಲೀಸ್ ಸಹಕಾರದೊಂದಿಗೆ ಆರೋಗ್ಯ ತಪಾಸಣೆ ನಡೆಸಿದ್ದಾರೆ. ನಂತರ ಕ್ವಾರಂಟೈನ್ ಸೀಲ್ ಹಾಕಿ ಜಕ್ಕನಕಟ್ಟಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆತನ ಸಹೋದರ ಹಾಗೂ ಕ್ಲೀನರ್​ರನ್ನು ಕ್ವಾರಂಟೈನ್ ಮಾಡಿದ್ದಾರೆ. ಮೇ 11ರಂದು (ಪಿ 853) ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಆತನ ಸಹೋದರ ಹಾಗೂ ಕ್ಲೀನರ್​ಗಳಿಗೆ ದೃಢಪಟ್ಟಿಲ್ಲ.

ಮರಳಿ ಕ್ವಾರಂಟೈನ್ ಮಾಡದಿರುವುದು ಕಾರಣ: ಪಿ. 853 ಗ್ರೀನ್​ಪಾಸ್ ಪಡೆದು ಮುಂಬೈಗೆ ತೆರಳಿದ್ದ ಎನ್ನಲಾಗಿದೆ. ಕರೊನಾ ಹೆಚ್ಚಿರುವ ರಾಜ್ಯವಾಗಿರುವ ಮುಂಬೈಗೆ ಮೊದಲ ಬಾರಿಗೆ ಹೋಗಿ ಬಂದ ಕೂಡಲೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅವರನ್ನು ಕ್ವಾರಂಟೈನ್ ಮಾಡದ ಪರಿಣಾಮ ಜಿಲ್ಲೆಯ ಹತ್ತಾರು ಗ್ರಾಮಗಳಿಗೂ ಕರೊನಾ ಸೋಂಕು ಹರಡಿರುವ ಭೀತಿ ಆವರಿಸಿದೆ. ಮೊದಲ ಪ್ರಕರಣದ ನಂತರವಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದೇ ನಿರ್ಲಕ್ಷ್ಯ ಮಾಡಿರುವ ಪರಿಣಾಮ ರೋಗಿಯ ಟ್ರಾವೆಲ್ ಹಿಸ್ಟರ್ ಬೆಚ್ಚಿ ಬೀಳಿಸುವಂತಿದೆ. ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮಾಹಿತಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಿಲ್ಲಾಡಳಿತಕ್ಕೆ ಲಭಿಸಿಲ್ಲ ಎನ್ನಲಾಗಿದೆ.