ಕುಮಟಾ: ತಾಲೂಕಿನಲ್ಲಿ ಕರೊನಾ ಸೋಂಕು ಹಬ್ಬುವುದನ್ನು ತಡೆಯುವ ನಿಟ್ಟಿನಲ್ಲಿ ಜು. 11ರಿಂದ ಪ್ರಮುಖ ರಸ್ತೆಯ 5 ಕಡೆಗಳಲ್ಲಿ ಚೆಕ್ಪೋಸ್ಟ್ ಆರಂಭಿಸಲಾಗುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಕರೊನಾ ವೈರಸ್ ತಡೆಗಟ್ಟುವ ಕುರಿತು ಇಲ್ಲಿನ ತಾಪಂ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಅನ್ಯ ರಾಜ್ಯ, ಜಿಲ್ಲೆಗಳಿಂದ ಹಾಗೂ ಮುಖ್ಯವಾಗಿ ಬೆಂಗಳೂರಿನಿಂದ ಬಹಳ ಜನ ಊರಿಗೆ ಮರಳುತ್ತಿದ್ದಾರೆ. ಇವರು ತಾಲೂಕಾಡಳಿತ ಮತ್ತು ಆಶಾ ಕಾರ್ಯಕರ್ತೆಯರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ ಎಂಬ ಆರೋಪವಿದೆ. ಬೆಂಗಳೂರಿನಿಂದ ಬಂದವರಲ್ಲೇ ಹೆಚ್ಚಿನ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದೆ. ಹೀಗಾಗಿ ಹೊರಗಿನಿಂದ ತಾಲೂಕಿಗೆ ಬರುವವರ ಮೇಲೆ ತೀವ್ರ ನಿಗಾ ಇರಿಸಬೇಕಾಗಿದೆ. ಮೊದಲಿದ್ದ ಚೆಕ್ಪೋಸ್ಟ್ಗಳನ್ನು ಪುನಃ ತೆರೆಯಬೇಕಾಗಿದೆ ಎಂದರು.
ಗೋಕರ್ಣದ ಹಿತ್ತಲಮಕ್ಕಿ, ಹಿರೇಗುತ್ತಿ, ಕತಗಾಲ, ಸಾಂತಗಲ್, ಹೊಳೆಗದ್ದೆಯಲ್ಲಿ ಚೆಕ್ ಪೋಸ್ಟ್ ಆರಂಭಿಸುವುದು, ಪೊಲೀಸ್, ಅರಣ್ಯ, ಆರೋಗ್ಯ, ಶಿಕ್ಷಣ ಇಲಾಖೆಯ ಒಟ್ಟು 5 ಮಂದಿ ಕಾರ್ಯನಿರ್ವಹಿಸಬೇಕು. ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ಚೆಕ್ಪೋಸ್ಟ್ನ ಉಸ್ತುವಾರಿ ವಹಿಸಬೇಕು. ಪ್ರತಿಯೊಂದು ವಾಹನ ತಪಾಸಣೆ, ಅನುಮಾನವಿದ್ದಲ್ಲಿ ಕೂಡಲೇ ಗಂಟಲ ದ್ರವ ಸಂಗ್ರಹಿಸಿ ತಪಾಸಣೆಗೆ ಕಳುಹಿಸುವುದು, ನಿತ್ಯ ಚೆಕ್ಪೋಸ್ಟ್ನಲ್ಲಿ ಸಂಗ್ರಹವಾದ ಮಾಹಿತಿಯನ್ನು ಉಪವಿಭಾಗಾಧಿಕಾರಿ ಪರಿಶೀಲಿಸಿ ಆರೋಗ್ಯಾಧಿಕಾರಿ ಹಾಗೂ ಆಯಾ ಪಂಚಾಯಿತಿ ಕಾರ್ಯಪಡೆಗಳಿಗೆ ರವಾನಿಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಶಾಸಕರು ತಿಳಿಸಿದರು.
ಜಿಪಂ ಸದಸ್ಯ ಗಜಾನನ ಪೈ, ಉಪವಿಭಾಗಾಧಿಕಾರಿ ಅಜಿತ್ ಎಂ.ರೈ., ತಹಸೀಲ್ದಾರ್ ಮೇಘರಾಜ ನಾಯ್ಕ, ತಾಪಂ ಇಒ ಸಿ.ಟಿ. ನಾಯ್ಕ, ಸಿಪಿಐ ಪರಮೇಶ್ವರ ಗುನಗಾ, ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ.ಕೆ., ಪಿಎಸ್ಐ ಆನಂದಮೂರ್ತಿ, ಎಇಇ ರಾಜು ಶಾನಭಾಗ, ರಾಮದಾಸ ಗುನಗಿ, ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ತೋಟಗಾರಿಕೆ ಇಲಾಖೆ ಅಧಿಕಾರಿ ಚೇತನ್ ನಾಯ್ಕ, ರೇಷ್ಮೆ ಇಲಾಖೆ ಅಧಿಕಾರಿ ಎ.ಎಸ್.ನೆಹ್ರು, ಬಿಇಒ ಆರ್.ಎಲ್. ಭಟ್ಟ ಇತರರು ಇದ್ದರು.