ಹುಬ್ಬಳ್ಳಿ: ಕರೊನಾ ಸೋಂಕು ದೃಢಪಟ್ಟು ಮನೆಯಲ್ಲಿ ಆರೈಕೆಯಲ್ಲಿರುವವರ (ಹೋಂ ಐಸೋಲೇಷನ್) ನಿವಾಸದ ಮುಂದೆ ಅಥವಾ ಮನೆಯ ಬಾಗಿಲಿಗೆ ‘ರೆಡ್ ಟೇಪ್’ ಕಟ್ಟಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ. ಹು-ಧಾ ಅವಳಿ ನಗರದಲ್ಲಿ ಇದೇ ಗುರುವಾರ ಅಥವಾ ಶುಕ್ರವಾರದಿಂದ ಈ ಉಪಕ್ರಮ ಜಾರಿಗೆ ಬರಲಿದೆ.
ಸುಮಾರು 25 ದಿನಗಳ ಹಿಂದಿನಿಂದ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಸಿ) ಅನುಸರಿಸುತ್ತಿರುವ ಇಂತಹ ಕ್ರಮವನ್ನು ಇಲ್ಲಿಯ ಮಹಾನಗರ ಪಾಲಿಕೆ ಫಾಲೋ ಮಾಡಲು ಹೊರಟಿದೆ.
ಎಚ್ಡಿಎಂಸಿ: ಡೇಂಜರ್-ಕೀಪ್ ಅವೇ (ಎಚ್ಡಿಎಂಸಿ: ಅಪಾಯ-ದೂರ ಇರಿ) ಎಂಬ ಬರಹವನ್ನು ಕೆಂಪು ಪಟ್ಟಿಯ ಮೇಲೆ ಮುದ್ರಿಸಲಾಗುತ್ತಿದೆ. ಕೆಂಪು ಪಟ್ಟಿಯು 4 ಇಂಚು ಅಗಲವಿರಲಿದೆ. 2 ಕಿ.ಮೀ. ಉದ್ದದಷ್ಟು ಕೆಂಪು ಪಟ್ಟಿಯ ಮೇಲೆ ಬರಹ ಮುದ್ರಿಸಲು ಪಾಲಿಕೆ ಪ್ರಿಂಟಿಂಗ್ ಪ್ರೆಸ್ಗೆ ಆರ್ಡರ್ ನೀಡಿದೆ. ಅದು ಬುಧವಾರ (ಜೂನ್ 2) ಪಾಲಿಕೆಯ ಕೈ ಸೇರಲಿದೆ.
ಕರೊನಾ ಸೋಂಕಿತರು ಮನೆಯಿಂದ ಹೊರಗೆ ಬರುವುದನ್ನು ತಡೆಗಟ್ಟಲು ಹಾಗೂ ಯಾವ ಮನೆಯಲ್ಲಿ ಕರೊನಾ ಸೋಂಕಿತರು ಇದ್ದಾರೆ ಎಂಬುದು ಅಕ್ಕಪಕ್ಕದ ನಿವಾಸಿಗಳಿಗೆ ತಿಳಿಯಲಿ ಎಂಬ ಕಾರಣಕ್ಕೆ ಪಾಲಿಕೆ ಈ ಮಾದರಿಯನ್ನು ಅನುಸರಿಸಲು ಹೆಜ್ಜೆ ಇಟ್ಟಿದೆ. ಕರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ಈ ಕ್ರಮ ಪರಿಣಾಮಕಾರಿ ಎಂದು ಪಾಲಿಕೆ ಭಾವಿಸಿದೆ.
ಕರೊನಾ 2ನೇ ಅಲೆ ನಿಯಂತ್ರಣಕ್ಕೆ ಲಾಕ್ಡೌನ್ ಜಾರಿಯಾದ ಬಳಿಕ ಧಾರವಾಡ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. ಆದರೆ, ಈಗಲೂ ನಿತ್ಯ 500-600 ಪಾಸಿಟಿವ್ ಪ್ರಕರಣಗಳು ಬರುತ್ತಿವೆ. ಜಿಲ್ಲೆಯ ಒಟ್ಟು ಪ್ರಕರಣಗಳಲ್ಲಿ ಶೇ. 65ರಿಂದ 70ರಷ್ಟು ಹುಬ್ಬಳ್ಳಿ-ಧಾರವಾಡ ಅವಳಿ ನಗರದ್ದಾಗಿರುತ್ತದೆ. ಗ್ರಾಮೀಣ ಭಾಗದ ಸೋಂಕಿತರಿಗೆ ಹೋಂ ಐಸೋಲೇಷನ್ನಲ್ಲಿರಲು ಅವಕಾಶವಿಲ್ಲ. ಅವರು ಕೋವಿಡ್ ಕೇರ್ ಸೆಂಟರ್ (ಸಿಸಿಸಿ)ಗೆ ದಾಖಲಾಗಬೇಕು. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸೋಂಕಿತರು ಮನೆಯಲ್ಲಿಯೇ ಆರೈಕೆಯಲ್ಲಿರಬಹುದು.
ಯಾವುದೇ ವಸತಿ ಸಂಕೀರ್ಣ (ಅಪಾರ್ಟ್ವೆುಂಟ್), ಅಕ್ಕ ಪಕ್ಕದ ರಸ್ತೆ, ಒಂದೇ ರಸ್ತೆಯಲ್ಲಿರುವ 2-3 ಮನೆಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಕರೊನಾ ಪ್ರಕರಣಗಳು ಪತ್ತೆಯಾದಲ್ಲಿ ಆ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಗುರುತಿಸುವ ಪ್ರಕ್ರಿಯೆ ಸಹ ಅವಳಿ ನಗರದಲ್ಲಿ ಜಾರಿಯಲ್ಲಿದೆ. ಸದ್ಯ 35 ಕಂಟೇನ್ಮೆಂಟ್ ಜೋನ್ಗಳಿವೆ. ಇನ್ನು ಮುಂದೆ ಒಂದು ಮನೆಯಲ್ಲಿ ಒಬ್ಬರು ಸೋಂಕಿತರಿದ್ದರೂ ರೆಡ್ ಟೇಪ್ ಕಂಡು ಬರಲಿದೆ.
ಅಮಾನವೀಯ ನಡೆ: ಹೋಂ ಐಸೋಲೇಷನ್ನಲ್ಲಿರುವ ಕರೊನಾ ಸೋಂಕಿತರ ಮನೆಯ ಮುಂದೆ ‘ರೆಡ್ ಟೇಪ್’ ಕಟ್ಟುವ ಬಿಬಿಎಂಪಿ ನಿರ್ಧಾರ ಈಗಾಗಲೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಅವೈಜ್ಞಾನಿಕ ಹಾಗೂ ಅಮಾನವೀಯ ನಡೆ ಎಂದು ಬೆಂಗಳೂರಿಗರು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವಿರೋಧ ವ್ಯಕ್ತವಾಗಿದೆ. ಬಿಬಿಎಂಪಿ ಕಾರ್ಪೆರೇಟರ್ಗಳು ಸಹ ವಿರೋಧಿಸಿದ್ದಾರೆ. ಹೀಗಿರುವಾಗ ಜನಪ್ರತಿನಿಧಿಗಳ ಆಡಳಿತವಿಲ್ಲದ ಹು-ಧಾ ಮಹಾನಗರ ಪಾಲಿಕೆಯ ನಡೆಯನ್ನು ಇಲ್ಲಿಯ ಸಾರ್ವಜನಿಕರು ಹೇಗೆ ಸ್ವೀಕರಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ.
ಹೋಂ ಐಸೋಲೇಷನ್ನಲ್ಲಿರುವ ಕರೊನಾ ಸೋಂಕಿತರು ಮನೆಯಲ್ಲಿಯೇ 17 ದಿನಗಳ ಕಾಲ ಆರೈಕೆಯಲ್ಲಿ ಇರಬೇಕಾಗುತ್ತದೆ. ಈ ಅವಧಿಯಲ್ಲಿ ಅವರು ಮನೆಯಿಂದ ಹೊರಗೆ ಹೋಗುವ ಸಾಧ್ಯತೆಗಳಿರುತ್ತವೆ. ಇದನ್ನು ತಡೆಗಟ್ಟಲು ಸೋಂಕಿತರ ನಿವಾಸದ ಮುಂದೆ ಅಥವಾ ಮನೆಯ ಬಾಗಿಲಿಗೆ ರೆಡ್ ಟೇಪ್ ಕಟ್ಟಲು ನಿರ್ಧರಿಸಲಾಗಿದೆ. | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತರು