ದಾಂಡೇಲಿ: ನಗರದಲ್ಲಿ ಕರೋನಾ ನಿಯಂತ್ರಣಕ್ಕಾಗಿ ಸದ್ಯದಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲಾಗುತ್ತಿದ್ದು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಹೇಳಿದರು.
ಅವರು ನಗರಸಭೆಯ ಸಭಾಂಗಣದಲ್ಲಿ ಬುಧವಾರ ಹಳಿಯಾಳ-ದಾಂಡೇಲಿ-ಜೊಯಿಡಾ ವಿಭಾಗದ ಅಧಿಕಾರಿಗಳ ಸಭೆಯಲ್ಲಿ ಕರೋನಾ ಹಾಗೂ ಮಳೆಗಾಲ ನಿರ್ವಹಣೆ ಕುರಿತು ಪಾಲಿಸಬೇಕಾದ ಕ್ರಮಗಳ ಬಗ್ಗೆ ವಿವರಣೆ ನೀಡಿದರು.
ಜಿಲ್ಲೆಯ ಜನರಲ್ಲಿ ಕರೊನಾ ಬಗ್ಗೆ ಭಯ ಪಡದಂತೆ ಹಾಗೂ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಅವರು ತಿಳಿಸಿದರು.
ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಕರೋನಾ ಸೋಂಕು ಹೆಚ್ಚಾಗಿ ಕಾಣಿಸುವ ಪ್ರದೇಶಗಳಲ್ಲಿ ಜಾಗೃತಿ ವಹಿಸಿ, ರೋಗ ಲಕ್ಷಣಗಳಿರುವವರನ್ನು ಗುರುತಿಸಿ ಅವರ ಆರೋಗ್ಯ ತಪಾಸಣೆಗೆ ಹಾಗೂ ಚಿಕಿತ್ಸೆ ನೀಡಲು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮಹಮ್ಮದ್ ರೋಶನ್, ಸಹಾಯಕ ಆಯುಕ್ತರಾದ ಪ್ರಿಯಾಂಗಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರದ್ ನಾಯಕ, ಹಳಿಯಾಳ ತಹಸೀಲ್ದಾರ್ ವಿದ್ಯಾಧರ ಗುಳಗುಳೆ, ದಾಂಡೇಲಿ ತಹಸೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ಡಾ. ಸೈಯ್ಯದ್ ಜಾಹೇದಾಲಿ, ಡಿ.ವೈ.ಎಸ್.ಪಿ ಶಿವಾನಂದ ಚಲವಾದಿ, ಸಿ.ಪಿ.ಐ ಪ್ರಭು ಗಂಗನಳ್ಳಿ, ಮೋತಿಲಾಲ ಪವಾರ, ದಾಂಡೇಲಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಳಿ, ಹಳಿಯಾಳ ತಾಲೂಕು ಆರೋಗ್ಯಧಿಕಾರಿ ಡಾ. ರಮೇಶ ಕದಂ, ಕೆ.ಪಿ.ಸಿ.ಯ ಅಂಬಿಕಾನಗರದ ಕಾರ್ಯನಿರ್ವಾಹಕ ಅಭಿಯಂತರ ಮಹೇಶ, ಗಣೇಶಗುಡಿಯ ಸಹಾಯಕ ಅಭಿಯಂತರ ರಾಮದಾಸ ದೇಸಾಯಿ, ಜೊಯಿಡಾದ ಶಿರಸ್ಥದಾರ, ಸುರೇಶ ಒಕ್ಕುಂದ ಇತರರು ಉಪಸ್ಥಿತರಿದ್ದರು.
ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ: ಮಳೆಗಾಲದ ಸಮಯದಲ್ಲಿ ಗಣೇಶಗುಡಿ, ಬೊಮ್ಮನಳ್ಳಿ, ತಟ್ಟಿಹಳ್ಳ, ಕೊಡಸೊಳ್ಳಿ, ಕದ್ರಾ ಡ್ಯಾಮಗಳ ನೀರಿನ ಬಿಡುಗಡೆ ವೇಳೆ ಸೂಕ್ತ ಮುಂಜಾಗೃತೆ ವಹಿಸಬೇಕು ಎಂದು ಸೂಚಿಸಿದರು.