ಜಿಲ್ಲೆ

ಸೋಂಕಿತರ ಕುಟುಂಬಕ್ಕೆ ಧೈರ್ಯ ತುಂಬುತ್ತಿರುವ ಯುವಕರು

ಶಿರಸಿ: ಇಲ್ಲಿನ ನಾರಾಯಣಗುರುನಗರದ ಯುವಕರ ತಂಡವೊಂದು ಕರೊನಾ ಸೋಂಕಿತರು ಮತ್ತವರ ಕುಟುಂಬದವರಿಗೆ ಸ್ಪಂದಿಸುವ ಕೆಲಸಕ್ಕೆ ಮುಂದಾಗಿದೆ. ಕರೊನಾ ಆತಂಕದ ನಿವಾರಣೆ ಜತೆಗೆ ಸೋಂಕಿಗೆ ಒಳಗಾದ ವ್ಯಕ್ತಿಯ ಕುಟುಂಬಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ಏನು ಮಾಡಬಹುದು ಎಂಬ ಪ್ರಶ್ನೆಗೆ ನಗರದ ಹೊರವಲಯವಾದ ನಾರಾಯಣಗುರುನಗರದ ಯುವಕರು ಉತ್ತರ ಕಂಡುಕೊಂಡಿದ್ದಾರೆ. ಇಲ್ಲಿನ ಪ್ರದೀಪ ಗೌಡ, ಜೈವಂತ ನಾಯ್ಕ, ಗೌರೀಶ ನಾಯ್ಕ, ರಾಜು ಭಂಡಾರಿ ಅವರನ್ನು ಒಳಗೊಂಡ ತಂಡವು, ಕ್ವಾರಂಟೈನ್​ನಲ್ಲಿರುವವರಿಗೆ ಧೈರ್ಯ ತುಂಬುತ್ತಿದೆ. ಅವರಿಗೆ ಬೇಕಾದ ವಸ್ತುಗಳನ್ನು ಅವರವರ ಮನೆಯವರೆಗೂ ತಲುಪಿಸುವ ಕಾರ್ಯ ಮಾಡುತ್ತಿದೆ. ಈಗಾಗಲೇ ಸೋಂಕಿಗೆ ಒಳಗದ 15ಕ್ಕೂ ಹೆಚ್ಚು ಜನರ ಕುಟುಂಬವನ್ನು ಇವರು ಸಂರ್ಪಸಿ ಸಂತೈಸುವ ಕಾರ್ಯ ಮಾಡಿದ್ದಾರೆ.

ಅಗತ್ಯ ವಸ್ತುಗಳು ಗೇಟಿನ ಬಳಿ: ಸೋಂಕಿತರ ಮನೆಯವರೆಗೆ ಹೋಗುವ ಕೆಲಸದಲ್ಲಿ ಪಾಲ್ಗೊಳ್ಳುವಾಗ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಮತ್ತು ಶಾರೀರಿಕ ಅಂತರ ಕಡ್ಡಾಯವಾಗಿ ಪಾಲಿಸುವ ಇವರು ಸೋಂಕಿತರ ಮನೆಯ ಗೇಟಿನ ಬಳಿ ವಸ್ತುಗಳನ್ನು ಇಡುತ್ತಾರೆ. ಇದರಿಂದ ಬೇರೆಯವರಿಗೂ ಕರೊನಾ ದೊಡ್ಡ ವಿಷಯ ಅಲ್ಲ ಅನ್ನುವ ವಿಶ್ವಾಸ ಮೂಡುತ್ತದೆ. ಸೋಂಕಿತರ ಕುಟುಂಬದವರಿಗೂ ಊರವರು ತಮ್ಮನ್ನು ದೂರ ಮಾಡಿಲ್ಲ ಎಂಬ ವಿಶ್ವಾಸ ಮೂಡಿ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತಾರೆ ತಂಡದ ಸದಸ್ಯರು. ಬೇರೆ ಯಾರಾದರೂ ಈ ಕಾರ್ಯಕ್ಕೆ ಕೈ ಜೋಡಿಸುವವರು ಇದ್ದರೆ ಸ್ವಾಗತವಿದೆ. ಆದರೆ, ಒತ್ತಾಯಪೂರ್ವಕವಾಗಿ ಬರಬೇಡಿ, ವಿಷಯ ಸೂಕ್ಷ್ಮವಾಗಿರುವುದರಿಂದ ತಮ್ಮ ಕುಟುಂಬದವರ ಒಪ್ಪಿಗೆ ಇದ್ದರೆ ಮಾತ್ರ ಬನ್ನಿ ಎನ್ನುತ್ತಾರೆ ಗೌರೀಶ ನಾಯ್ಕ.