ಕೊಡಗು : ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಕ್ಕರಳ್ಳಿ ಗ್ರಾಮದಲ್ಲಿ ಕೌಟಂಬಿಕ ಜಗಳ ತಾರಕಕ್ಕೇರಿ, ಭಾನುವಾರ ಸಂಜೆ ಸೊಸೆಯೇ ಮಾವನನ್ನು ಗುಂಡಿಕ್ಕಿ ಕೊಂದಿದ್ದಾಳೆ. ಗ್ರಾಮದ ಕೃಷಿಕ ಕೆ.ಎ.ಮಂದಣ್ಣ(73) ಮೃತಪಟ್ಟವರು. ನೀಲಮ್ಮ(ಜ್ಯೋತಿ) ಆರೋಪಿ.
ಮನೆಯಲ್ಲಿ ಮಂದಣ್ಣ, ಅವರ ಪುತ್ರ ಕೆ.ಎಂ.ನಾಣಯ್ಯ, ಸೊಸೆ ನೀಲಮ್ಮ ವಾಸವಾಗಿದ್ದರು. ಕಳೆದ ಮೂರು ವರ್ಷಗಳಿಂದಲೂ ಮಾವ, ಸೊಸೆ ಜಗಳವಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಮನೆಯೊಳಗೆ ಪ್ರತ್ಯೇಕವಾಗಿ ಮಂದಣ ಅಡುಗೆ ಮಾಡುತ್ತಿದ್ದರು.
ಭಾನುವಾರ ಮಗ ನಾಣಯ್ಯ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಸೌಧೆ ಕಡಿಯಲು ತೆರಳಿದ ಸಂದರ್ಭದಲ್ಲಿ ಸೊಸೆ ಮತ್ತು ಮಾವನಿಗೆ ಜಗಳವಾಗಿದೆ. ಮಾವ ಹಾಸಿಗೆಯಲ್ಲಿ ಮಲಗಿದ್ದಾಗ ನೀಲಮ್ಮ ತನ್ನ ಗಂಡನ ಕೋವಿಯನ್ನು ತೆಗದುಕೊಂಡು ಸೊಂಟ ಮತ್ತು ಎದೆ ಭಾಗಕ್ಕೆ ಗುಂಡು ಹಾರಿಸಿದ್ದಾರೆ. ಮಂದಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪುತ್ರ ದೂರು ದಾಖಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
13ಎಸ್‌ಪಿಟಿ2-ಆರೋಪಿ ನೀಲಮ್ಮ(ಜ್ಯೋತಿ)