ಅರಕಲಗೂಡು: ಸೊಳ್ಳೆಗಳಿಂದ ಅನೇಕ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿವೆ. ಹೀಗಾಗಿ ಸೊಳ್ಳೆ ನಿಯಂತ್ರಣ ಕುರಿತು ವಿದ್ಯಾರ್ಥಿಗಳ ಮೂಲಕ ಸಮುದಾಯವನ್ನು ಜಾಗೃತಗೊಳಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ಹಮ್ಮಿಕೊಂಡಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ತಿಳಿಸಿದರು.
ಪಟ್ಟಣದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ಸೊಳ್ಳೆ ನಿಯಂತ್ರಣ ಕುರಿತು ಮಾದರಿಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಸೊಳ್ಳೆಯಿಂದ ಮಲೇರಿಯಾ, ಡೇಂಘಿ, ಚಿಕೂನ್ ಗುನ್ಯಾ ಸೇರಿದಂತೆ ವಿವಿಧ ರೋಗಗಳನ್ನು ಹರಡಲಿದ್ದು, ಇದರ ನಿಯಂತ್ರಣ ಕುರಿತು ಆರೋಗ್ಯ ಇಲಾಖೆ ವ್ಯಾಪಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ತಾರ್ಥಿಗಳಿಂದ ಮಾದರಿಗಳ ಪ್ರದರ್ಶನ ನಡೆಯುತ್ತಿದೆ ಎಂದರು.
ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಅರುಂಧತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ, ಬಿಆರ್‌ಪಿ ಲೋಹಿತ್, ಶಿಕ್ಷಣ ಇಲಾಖೆಯ ಶಿವಮೂರ್ತಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಟಿ.ಪರಮೇಶ್, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಎನ್ . ಚಂದ್ರೇಗೌಡ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಿಥುನ್, ಆಶಾ ಮೆಂಟರ್ ಕವಿತಾ ಇದ್ದರು.
32 ಹಿರಿಯ ಪ್ರಾಥಮಿಕ ಶಾಲೆ ಹಾಗೂ 18 ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸೊಳ್ಳೆ ಜೀವನ ವಿಧಾನ ಮತ್ತು ನಿಯಂತ್ರಣ ಕುರಿತು ವಿವಿಧ ರೀತಿಯ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಹೊನ್ನವಳ್ಳಿ ಶಾಲೆಯ ಭಾನುಪ್ರಿಯಾ(ಪ್ರಥಮ), ಪೇಟೆ ಮಾಚಗೌಡನ ಹಳ್ಳಿ ಶಾಲೆಯ ಎಂ.ಆರ್.ದರ್ಶಿನಿ (ದ್ವಿತೀಯ), ದೇವರಹಳ್ಳಿ ಶಾಲೆಯ ಸಿಂಧು (ತೃತೀಯ) ಬಹುಮಾನ ಗಳಿಸಿದರು.