ಸೊಲ್ಲಾಪುರ: ಮುಂದಿನ ಪೀಳಿಗೆಗೆ ಸಾಹಿತ್ಯದ ಖಜಾನೆ ತೆರೆದಿಟ್ಟು ನಿಸರ್ಗದ ಜತೆ ಸಮರಸ ಜೀವನ ಸಾಗಿಸುತ್ತಿರುವ ಮಾರುತಿ ಚಿತ್ತಮಪಲ್ಲಿ ಕೇಂದ್ರ ಸರ್ಕಾರದ ಪದ್ಮಶ್ರೀ ಪುರಸ್ಕಾರ ಪಡೆದು ಜಿಲ್ಲೆ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಸೊಲ್ಲಾಪುರ ಸಮರಸತಾ ಸಾಹಿತ್ಯ ಬಳಗದ ಅಧ್ಯಕ್ಷ ಮಾಧವ ಕುಲಕರ್ಣಿ ಶ್ಲಾಘಿಸಿದರು.
ಅಕ್ಕಲಕೋಟ ರಸ್ತೆಯ ಮಣಿಧಾರ ಸೊಸೈಟಿಯಲ್ಲಿ ಭಾನುವಾರ ಏರ್ಪಡಿಸಿದ್ದ ಮಹಾರಾಷ್ಟ್ರ ಅರಣ್ಯ ಋಷಿ ಪದ್ಮಶ್ರೀ ಚಿತ್ತಮಪಲ್ಲಿ ಅವರ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ನಿಸರ್ಗದ ಜತೆ ಪ್ರಾಣಿ-ಪಕ್ಷಿಗಳಿಗೆ ಪ್ರೀತಿಸುವ ನಿಟ್ಟಿನಲ್ಲಿ ನೂರಾರು ಪುಸ್ತಕ ಬರೆದು ಮಾರುತಿ ಆದರ್ಶಪ್ರಿಯರಾಗಿದ್ದಾರೆ ಎಂದರು.
ಪ್ರೊ.ಭೀಮಾಶಂಕರ ಬಿರಾಜದಾರ ಮಾತನಾಡಿ, ಸಂಘರ್ಷಮಯಿ ಚಿತ್ತಮಪಲ್ಲಿ ಅವರಿಗೆ ಪದ್ಮಶ್ರೀ ದೊರೆತಿದ್ದು ನಮ್ಮೆಲ್ಲರಿಗೂ ಹೆಮ್ಮೆ ವಿಷಯ ಎಂದು ಹೇಳಿದರು.
ಪ್ರೊ.ಭೀಮಾಶಂಕರ ಬಿರಾಜದಾರ, ಪ್ರೊ.ಮಾಧವ ಕುಲಕರ್ಣಿ, ವಸುಂಧರಾ ಶರ್ಮಾ, ದೇವೇಂದ್ರ ಔಟಿ, ಶರಣಪ್ಪ ಫುಲಾರಿ, ಜಗನ್ನಾಥ ಹುಕ್ಕೇರಿ, ಅನಿತಾ ಕುಲಕರ್ಣಿ, ದಿನೇಶ ಮಡಕೆ, ಕಾಶೀನಾಥ ಬಿರಾಜದಾರ, ಶುಭಾಂಗಿ ಪೂಜಾರಿ, ಅರ್ಣವ್ ಕುಲಕರ್ಣಿ ಉಪಸ್ಥಿತರಿದ್ದರು.
ದಶರಥ ವಡತಿಲೆ ನಿರೂಪಣೆ ಮಾಡಿದರು. ಪ್ರೊ.ಧನ್ಯಕುಮಾರ ಬಿರಾಜದಾರ ವಂದಿಸಿದರು. ರೇವಣಸಿದ್ಧ ಫುಲಾರಿ ಮತ್ತು ಶ್ರದ್ಧಾ ರೋಡಗೆ ಅವರು ಮಾರುತಿ ಚಿತ್ತಮಪಲ್ಲಿ ಕುರಿತು ರಚಿಸಿದ ಹಾಡುಗಳನ್ನು ಹಾಡಿ ಗಮನಸೆಳೆದರು.