ಜಿಲ್ಲೆ

ಸೊರಬ ಎಪಿಎಂಸಿ ಗಾದಿ ಜೆಡಿಎಸ್​ಗೆ ಸುಲಭವಲ್ಲ

ಸೊರಬ: ಸೊರಬ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಜು.10ರಂದು ಚುನಾವಣೆ ನಿಗದಿಯಾಗಿದ್ದು ಆಕಾಂಕ್ಷಿಗಳಲ್ಲಿ ಬಿರುಸಿನ ಚಟವಟಿಕೆ ಆರಂಭವಾಗಿದೆ.

2011ರಲ್ಲಿ ಸಾಗರ ಎಪಿಎಂಸಿಯಿಂದ ಬೇರ್ಪಟ್ಟ ಮೇಲೆ 2017ರವರೆಗೆ ನಾಮನಿರ್ದೇರ್ಶನ ಸಮಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕಾರ್ಯನಿರ್ವಹಿಸಿದ್ದರು. ನಂತರ 2017ರಲ್ಲಿ 11 ಜನ ರೈತ ಪ್ರತಿನಿಧಿಗಳು, ಸಹಕಾರ ಮಾರಾಟಗಾರರ ಸಂಘ ಹಾಗೂ ವರ್ತಕರ ಸಂಘದಿಂದ ತಲಾ ಒಬ್ಬರು ಸದಸ್ಯರು ಚುನಾಯಿತರಾಗುವುದರ ಮೂಲಕ ಮೊದಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂತು.

ಆಗ ಜೆಡಿಎಸ್ ಬೆಂಬಲಿತ 8, ಬಿಜೆಪಿ ಬೆಂಬಲಿತ 3 ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಜತೆಗೆ ವರ್ತಕರ ಸಂಘದ ಪ್ರತಿನಿಧಿಯಾಗಿ ಫಯಾಜ್ ಅಹಮ್ಮದ್ ಹಾಗೂ ಸಹಕಾರ ಮಾರಾಟಗಾರರ ಸಂಘದಿಂದ ರಾಜೇಂದ್ರ ನಾಯ್ಕ ಆಯ್ಕೆಯಾಗಿದ್ದರು.

13 ಸದಸ್ಯ ಬಲದ ಎಪಿಎಂಸಿಯಲ್ಲಿ ಮೊದಲ ಅವಧಿಯಲ್ಲಿ ಸಂಖ್ಯಾಬಲ ಇಲ್ಲದಿದ್ದರೂ ಬಿಜೆಪಿ ಬೆಂಬಲಿತ ಸದಸ್ಯ ದಯಾನಂದ ಗೌಡ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಹಿಂಪಡೆದಿದ್ದರು. ಜೆಡಿಎಸ್​ನ ಎಲ್.ಜಿ.ರಾಜಶೇಖರ್ ಅವಿರೋಧ ಆಯ್ಕೆಯಾಗುವುದರ ಮೂಲಕ ಮೊದಲ ಚುನಾಯಿತ ಎಪಿಎಂಸಿ ಅಧ್ಯಕ್ಷರಾಗಿ 20 ತಿಂಗಳು ಅಧಿಕಾರ ನಡೆಸಿದ್ದರು. ಉಪಾಧ್ಯಕ್ಷರಾಗಿ ಜಯಶೀಲ ಗೌಡ ಆಯ್ಕೆಯಾಗಿದ್ದರು.

ಎರಡನೇ ಅವಧಿಗೆ ಜೆಡಿಎಸ್ ಬೆಂಬಲಿತ ಕೆ.ಅಜ್ಜಪ್ಪ ಅಧ್ಯಕ್ಷರಾಗಿ, ನೀಲಕಂಠ ಗೌಡ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗುವುದರ ಮೂಲಕ ಜೆಡಿಎಸ್ ಎರಡನೇ ಅವಧಿಗೂ ಯಾವುದೇ ಆತಂಕವಿಲ್ಲದೆ ಎಪಿಎಂಸಿ ಗದ್ದುಗೆ ಹಿಡಿದಿತ್ತು.

ಆದರೆ ಬಾಕಿ ಉಳಿದಿರುವ 20 ತಿಂಗಳ ಅವಧಿಗೆ ಅಧಿಕಾರ ಹಿಡಿಯುವುದು ಜೆಡಿಎಸ್​ಗೆ ಸುಲಭದ ಹಾದಿ ಅಲ್ಲ. ಬಹಳಷ್ಟು ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ. ಅಲ್ಲದೆ ಸರ್ಕಾರದಿಂದ ಈಗ ಮೂರು ಜನ ನಾಮನಿರ್ದೇಶನ ಸದಸ್ಯರನ್ನು ನೇಮಕ ಮಾಡಲಾಗಿದೆ. ಇದರಿಂದ ಬಿಜೆಪಿಯ ಸಂಖ್ಯಾಬಲ 6 ಆಗಿದೆ. ಜತೆಗೆ ಒಟ್ಟು ಸದಸ್ಯರ ಸಂಖ್ಯೆ 13ರಿಂದ 16ಕ್ಕೆ ಏರಿಕೆ ಆಗಿದೆ. ಅಧಿಕಾರ ಹಿಡಿಯಲು 9 ಸದಸ್ಯರ ಬಲ ಬೇಕು. ಈ ಮಧ್ಯೆ ವರ್ತಕರ ಸಂಘದ ಫಯಾಜ್ ಅಹಮದ್ ಮೂಲತಃ ಕಾಂಗ್ರೆಸ್ಸಿಗರಾಗಿದ್ದರೂ ಶಾಸಕ ಕುಮಾರ್ ಬಂಗಾರಪ್ಪ ಬೆಂಬಲಿಗ. ಅವರು ಬಿಜೆಪಿ ಬೆಂಬಲಿಸುವುದು ನಿಚ್ಚಳವಾಗಿದೆ. ಅದೇ ರೀತಿ ರಾಜೇಂದ್ರ ನಾಯ್ಕ ಜೆಡಿಎಸ್ ಕಟ್ಟಾಳು. ಹೀಗಾಗಿ ಜೆಡಿಎಸ್​ಗೆ 9 ಹಾಗೂ ಬಿಜೆಪಿಗೆ 7 ಸದಸ್ಯರ ಬೆಂಬಲ ಇದೆ. ಆದರೆ ಮೂರನೇ ಅವಧಿಗೆ ಬಿಜೆಪಿ ಅಧಿಕಾರ ಹಿಡಿಯಬೇಕು ಎಂಬ ಶತ ಪ್ರಯತ್ನ ಮಾಡುತ್ತಿದೆ. ಜೆಡಿಎಸ್​ನ ವಂಚಿತ ಆಕಾಂಕ್ಷಿಗಳನ್ನು ಸೆಳೆಯುವ ಪ್ರಯತ್ನ ಆರಂಭಿಸಿದೆ.

ಕುಮಾರ್, ಮಧು ನಿರ್ಧಾರದ ಮೇಲೆ ಫಲಿತಾಂಶ: ಜೆಡಿಎಸ್ ಬೆಂಬಲಿತ ಸದಸ್ಯರು ಮಧುಬಂಗಾರಪ್ಪ ಅವರ ನಿರ್ಧಾರ ಎದುರು ನೋಡುತ್ತಿದ್ದು ಪಕ್ಷದಲ್ಲಿ ರ್ಚಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಆಕಾಂಕ್ಷಿಗಳು ಮಾತ್ರ ಸದಸ್ಯರ ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದಾರೆ. ಬಿಜೆಪಿ ಕೂಡ ಈ ಬಾರಿ ಅಧಿಕಾರ ಹಿಡಿಯಬೇಕು ಎಂದು ತೆರೆಮೆರೆಯಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದು ಕೃಷಿ ಕ್ಷೇತ್ರದಿಂದ ಆಯ್ಕೆಯಾದ ಮೂರು ಸದಸ್ಯರಿಗೆ ಮಾತ್ರ ಅಧ್ಯಕ್ಷ ಗಾದಿ ಅವಕಾಶ ಇದ್ದು ಶಾಸಕ ಕುಮಾರ್ ಬಂಗಾರಪ್ಪ ಅವರ ತೀರ್ವನಕ್ಕೆ ಕಾಯುತ್ತಿದ್ದಾರೆ.

ನಾಮನಿರ್ದೇಶನದ ಮೂರು ಸದಸ್ಯದ್ದ ನಮ್ಮ ಸಂಖ್ಯಾಬಲ 7 ಆಗಿದೆ. ನಮ್ಮ ಪಕ್ಷದಿಂದ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದು ಖಚಿತ. ಶಾಸಕರು ಯಾವ ತೀರ್ಮಾನ ತಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧ.

| ವೈ.ಎಂ.ನಾಗರಾಜ್, ಬಿಜೆಪಿ ಬೆಂಬಲಿತ ಸದಸ್ಯ ನಿರ್ದೇಶಕ

ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ. ಪಕ್ಷ ನಮ್ಮನ್ನು ಗುರುತಿಸಿ ಸಾಮಾಜಿಕ ನ್ಯಾಯ ಒದಗಿಸುತ್ತದೆ ಎಂಬ ನಂಬಿಕೆ ನನಗೆ ಇದೆ. ನಮ್ಮ ನಾಯಕ ಮಧುಬಂಗಾರಪ್ಪ ಅವರ ತೀರ್ವನಕ್ಕೆ ನಾವು ಬದ್ಧ.

| ಜಯಶೀಲಪ್ಪ ಗುಡಗಿನಕೊಪ್ಪ, ಜೆಡಿಎಸ್ ಬೆಂಬಲಿತ ನಿರ್ದೇಶಕ

ಮೊದಲ ಅವಧಿಗೆ ಉಪಾಧ್ಯಕ್ಷನಾಗಿದ್ದೆ. ಎರಡನೇ ಅವಧಿಯಲ್ಲಿ ಆಕಾಂಕ್ಷಿಯಾಗಿದ್ದ ನಾನು ಈ ಬಾರಿ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ಪಕ್ಷ ಮತ್ತು ನಮ್ಮ ನಾಯಕರಾದ ಮಧುಬಂಗಾರಪ್ಪ ಅವರ ತೀರ್ವನಕ್ಕೆ ಬದ್ಧವಾಗಿರುತ್ತೇವೆ.

| ಜಯಶೀಲಗೌಡ ಅಂಕರವಳ್ಳಿ, ಜೆಡಿಎಸ್ ಬೆಂಬಲಿತ ಸದಸ್ಯ