ಜಿಲ್ಲೆ

ಸೈಬರ್ ವಂಚಕರಿಂದ ಮಹಿಳೆಗೆ 1.60 ಲಕ್ಷ ರೂ. ವಂಚನೆ

ಹಾಸನ:  ಲಿಂಕ್ ಮೂಲಕ ಹಣ ಹೂಡಿ ಷೇರು ಖರೀದಿ ಮಾಡಿದರೆ ಪ್ರತಿದಿನ ಎರಡು ತಿಂಗಳವರೆಗೆ ಹಣ ಬರುತ್ತದೆ ಎಂದು ಹೇಳಿ 1,60,000 ರೂಪಾಯಿ ವಂಚನೆ ಮಾಡಲಾಗಿದೆ.

ಹೊಳೆನರಸೀಪುರದ ವ್ಯಕ್ತಿಯೊಬ್ಬರ ಪತ್ನಿಯ ಮೊಬೈಲ್ ಸಂಖ್ಯೆಗೆ ಫೇರ್‌ಬರ್ನ್ ಎಂಬ ಅಪ್ಲಿಕೇಷನ್ ಲಿಂಕ್ ಬಂದಿದ್ದು, ಇದರಲ್ಲಿ ಷೇರು ಖರೀದಿ ಮಾಡಿ, ಹಣ ಹೂಡಿಕೆ ಮಾಡಿದರೆ ಪ್ರತಿದಿನ 2 ತಿಂಗಳವರೆಗೂ ಹಣ ಬರುತ್ತದೆ ಎಂದು ಹೇಳಿ ಸೈಬರ್ ವಂಚಕರು ನಂಬಿಸಿದ್ದಾರೆ. ಇದನ್ನು ನಂಬಿದ ಸಂತ್ರಸ್ತರು ಲಿಂಕ್ ಕ್ಲಿಕ್ ಮಾಡಿ ವಿವಿಧ ದಿನಾಂಕಗಳಂದು ಷೇರು ಖರೀದಿ ಮಾಡಿ ಫೋನ್ ಪೇ ಮೂಲಕ 1,60,000 ಹಣ ಸಂದಾಯ ಮಾಡಿದ್ದಾರೆ. ಸಂದಾಯ ಮಾಡಿರುವ ಹಣಕ್ಕೆ ಫೋನ್ ಪೇನಲ್ಲಿ ಯಾವುದೇ ಬೋನಸ್ ಬಾರದೇ ಇದ್ದಾಗ ತಾವು ಲಿಂಕ್‌ನಿಂದ ಮೋಸ ಹೋಗಿರುವುದು ಗೊತ್ತಾಗಿದೆ. ಆ ನಂತರ ಆ.29ರಂದು ಸಂತ್ರಸ್ತರು ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ಹಾಜರಾಗಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವ ಅಪರಿಚಿತನನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.