ಕಲಬುರಗಿ: ಮನಿ ಲ್ಯಾಂಡ್ರಿಂಗ್ ಪ್ರಕರಣದಲ್ಲಿ ತನಿಖೆ ಮಾಡುವ ನೆಪದಲ್ಲಿ ಮುಂಬೈ ಕ್ರೈಂ ಬ್ರ್ಯಾಂಚ್ ಅಧಿಕಾರಿಯ ಸೋಗಿನಲ್ಲಿ ಪ್ರತಿಷ್ಠಿತ ವೈದ್ಯ ಡಾ.ಪಿ.ಎಸ್.ಶಂಕರ ಅವರಿಗೆ ಮೋಸದ ಜಾಲ ಬೀಸಿ, ೭೬.೬೫ ಲಕ್ಷ ರೂ.ವನ್ನು ವಂಚಿಸಿರುವ ಕುರಿತು ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ ೧೩ರಂದು ಮುಂಬೈನ್ ಕ್ರೈಂ ಬ್ರ್ಯಾಂಚ್ ಪೊಲೀಸ್ ಇನ್ಸ್ಪೆಕ್ಟರ್ ವಿಜಯಕುಮಾರ ಚೌಬೆ ಎಂದು ಹೇಳಿಕೊಂಡು ಕರೆ ಮಾಡಿ `ಮುಂಬೈನಲ್ಲಿನ ಕೆನರಾ ಬ್ಯಾಂಕ್‌ನಲ್ಲಿನ ನಿಮ್ಮ ಬ್ಯಾಂಕ್ ಖಾತೆಯಿಂದ ಜೆಟ್ ಏವೇಸ್ ಮಾಲಿಕ ನರೇಶ ಗೋಯಲ್‌ಗೆ ವರ್ಗಾವಣೆ ಆಗಿವೆ. ನರೇಶ ಗೋಯಲ್ ವಿರುದ್ಧ ಮನಿ ಲ್ಯಾಂಡ್ರಿಂಗ್ ಕೇಸ್ ಆಗಿದ್ದು, ನೀವು ಅಪರಾಧ ಮಾಡಿಲ್ಲ ಎಂದಾದರೆ ನಿಮ್ಮನ್ನು ವಿಚಾರಣೆ ಮಾಡಬೇಕಾಗುತ್ತದೆ ಎಂದಿದ್ದಾನೆ. ನಿಮ್ಮ ಖಾತೆಗಳ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿದ್ದಾನೆ.
ವಂಚನಕನ ಮಾತು ನಂಬಿ ಡಾ.ಶಂಕರ ಅವರು ತಮ್ಮ ಹೆಸರಿನಲ್ಲಿರುವ ಕಲಬುರಗಿಯ ಟಿಬಿಎಂ ಬ್ಯಾಂಕ್‌ನಲ್ಲಿ ೪೫ ಲಕ್ಷ ರೂ., ಎಸ್‌ಬಿಐ ಬ್ಯಾಂಕ್‌ನಲ್ಲಿ ೪೯ ಲಕ್ಷ ರೂ., ಕೆನರಾ ಬ್ಯಾಂಕ್‌ನಲ್ಲಿ ೧೦ ಲಕ್ಷ ರೂ. ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಗುಪ್ತವಾಗಿ ಇಡಬೇಕು. ಪ್ರತಿ ಆರು ಗಂಟೆಗೊಮ್ಮೆ ಇದ್ದ ಸ್ಥಳ, ಕೆಲಸದ ಬಗ್ಗೆ ಅಪ್ಡೇಟ್ ಮಾಡಬೇಕು. ೧೫ ದಿನ ಇದ್ದ ಊರು ಬಿಡಬಾರದು ಎಂದು ವಂಚಕ ಹೆದರಿಸಿದ್ದಾನೆ.
ಮೇ ೧೪ರಂದು ವಾಟ್ಸ್ಪ್ ಕರೆ ಮಾಡಿ, ನಿಮ್ಮ ವಿರುದ್ಧ ಸುಪ್ರೀಂ ಕೋರ್ಟ್ ಅರೆಸ್ಟ್ ವಾರಂಟ್ ಹೊರಡಿಸಿದ್ದು, ಮಧ್ಯಾಹ್ನ ೨ರೊಳಗೆ ಎಕ್ಸಿಕ್ಯೂಟ್ ಮಾಡಬೇಕು. ಸಿಬಿಐನವರು ಬಂಧಿಸುತ್ತಾರೆ. ನಿಮಗೆ ಸಹಾಯ ಬೇಕಾದರೆ ಸಿಬಿಐ ಮೇಲಾಧಿಕಾರಿಗೆ ಮನವಿ ಮಾಡಿ ಎಂದು ಮೇಲಾಧಿಕಾರಿ ಆಕಾಶ ಪುಲ್ಹಾರಿ ಎಂಬುವನ ಹೆಸರು ಹೇಳಿದ್ದಾನೆ. ಆಕಾಶನು ವಿಚಾರಣೆ ನೆಪದಲ್ಲಿ ನಿಮ್ಮ ಖಾತೆಯಲ್ಲಿನ ಹಣವನ್ನು ವರ್ಗಾಯಿಸಲು ಹೇಳಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ದೀಮಾಪುರ ಬ್ರಾಂಚ್‌ಗೆ ೪೪.೬೫ ಲಕ್ಷ ರೂ. ವರ್ಗಾಯಿಸಿದ್ದಾರೆ.
ಮೇ ೧೫ರಂದು ಕರೆ ಮಾಡಿ, ಇನ್ನುಳಿದ ಎರಡು ಬ್ಯಾಂಕ್‌ಗಳ ಆಡಿಟ್ ಮಾಡುವುದಿದೆ ಅದರಲ್ಲಿನ ಹಣವನ್ನು ವೈಬ್ ಎಂಟರ್‌ಪ್ರೆÊಜಸ್‌ನ ಖಾತೆಗೆ ೨೨ ಲಕ್ಷ ರೂ., ಮತ್ತೊಮ್ಮೆ ೧೦ ಲಕ್ಷ ರೂ. ಸೇರಿ ಒಟ್ಟು ೭೬.೬೫ ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ನಂತರ ಮೂರು ದಿನವಾದರೂ ಮರಳಿ ಕರೆ ಬಂದಿಲ್ಲ. ಈ ಕುರಿತು ಪುತ್ರನಿಗೆ ತಿಳಿಸಿದಾಗ ಇದು ಸೈಬರ್ ಅಪರಾಧ ಎಂಬುದು ತಿಳಿದು ಬಂದ ನಂತರ ಸೈಬರ್ ಹೆಲ್ಪಲೈನ್ ೧೯೩೦ಗೆ ಕರೆ ಮಾಡಿ, ದೂರು ನೀಡಿದ್ದಾರೆ.