ಹಾಸನ: ಪ್ರಸ್ತುತದಲ್ಲಿ ನಡೆಯುತ್ತಿರುವ ಸೈಬರ್ ಕ್ರೈಂನ ವಂಚನೆ ಸಮಾಜಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎನ್.ಇನವಳ್ಳಿ ಕಳವಳ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸೈಬರ್ ಲಾ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಸೈಬರ್ ಮೂಲಕ ನಾನಾ ರೀತಿಯ ವಂಚನೆ ಪ್ರಕರಣ ಹೆಚ್ಚಾಗುತ್ತಿದ್ದು, ಸಮಾಜದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ. ಈ ಬಗ್ಗೆ ಮೊದಲೇ ಜಾಗೃತಿ ವಹಿಸುವುದು ಮುಖ್ಯ. ಈಗ ಪ್ರತಿ ಮನೆಯಲ್ಲೂ ಬೆಳಗಾದರೆ ಸಾಕು ಕೈಲಿ ಮೊಬೈಲ್ ಇರಲೇಬೇಕು. ಹಿಂದಿನ ಮತ್ತು ಇಂದಿನ ತಂತ್ರಜ್ಞಾನ ಬದಲಾಗಿದೆ. ಸೈಬರ್ ಕ್ರೈಂ ಎಂದರೆ ಮೋಸ ಮಾಡುವ ಕಾರ್ಯ, ಹಣದ ಬೇಡಿಕೆ ಇಡುವುದು, ಕಂಪ್ಯೂಟರ್‌ನಲ್ಲಿ ಮೋಸ ಮಾಡುವುದು, ಮತ್ತೊಬ್ಬರಿಗೆ ಬ್ಲಾಕ್‌ಮೇಲ್ ಮಾಡುವುದಾಗಿದೆ. ಜಾಗೃತಿ ಇದ್ದರೇ ಇಂತಹ ಮೋಸದ ಜಾಲಕ್ಕೆ ಸಿಲುಕುವುದನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ಮೊಬೈಲ್ ಮೂಲಕ ಯಾರೂ ಕೂಡ ನಿಮ್ಮ ವಯಕ್ತಿಕ ಮಾಹಿತಿ ನೀಡದೇ ಎಚ್ಚರದಿಂದ ಇದ್ದರೆ ಯಾವುದೇ ರೀತಿ ಮೋಸ ಹೋಗಲು ಸಾಧ್ಯವಿಲ್ಲ. ಹಿಂದೆ ಮೊಬೈಲ್ ತರಬಾರದು ಎಂದು ಉಪದೇಶ ಮಾಡಿದರೆ ಪ್ರಸ್ತುತದಲ್ಲಿ ಮೊಬೈಲ್ ತರಗತಿ ಆಗಿಬಿಟ್ಟಿದೆ. ಎಲ್ಲಾ ಇಲಾಖೆಗಳಲ್ಲೂ ಸಹ ಕಂಪ್ಯೂಟರ್ ಬಂದಿದ್ದು, ತಂತ್ರಜ್ಞಾನ ಮುಂದುವರಿದಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ಕಳ್ಳತನ ಎಂದರೆ ಮನೆ, ಅಂಗಡಿ ಇತರೆ ಕಡೆ ಒಡವೆ, ಹಣ ಕಳ್ಳತನ ಆಗಿರುವ ಬಗ್ಗೆ ದೂರು ದಾಖಲಿಸಿ ತನಿಖೆ ಮೂಲಕ ಹುಡುಕಿ ಕೊಡಲಾಗುತ್ತಿತ್ತು. ಆದರೆ, ಈಗ ದಿನೇ ದಿನ ಲಕ್ಷಗಟ್ಟಲೆ ಹಣ ಸೈಬರ್ ಮೂಲಕ ಕಳೆದು ಹೋಗುತ್ತಿದೆ. ಆದರೆ ಮನೆ ಕಳ್ಳತನಕ್ಕೆ ಕೊಡುವ ಗಮನ ಈ ಸೈಬರ್ ಕ್ರೈಂಗೆ ಪೊಲೀಸರು ಕೊಡುತ್ತಿಲ್ಲ. ಸಾರ್ವಜನಿಕರು ಕಳ್ಳತನವಾದಾಗ ದೂರು ಕೊಟ್ಟಾಗ ಪೊಲೀಸರು ತನಿಖೆ ಮಾಡುವ ತೋರುವ ಗಂಭೀರತೆ, ಸೈಬರ್ ಕ್ರೈಂ ಬಗ್ಗೆ ಬರುವುದಿಲ್ಲ ಎಂದರು.
ಮನೆ ಕಳ್ಳತನವಾದಾಗ ಬೇಗ ಪತ್ತೆ ಹಚ್ಚಬಹುದು. ಆದರೆ ಸೈಬರ್ ಮೂಲಕ ಮೋಸ ಹೋದವರ ಹಣ ಹುಡುಕುವುದು ಕಷ್ಟವೇ ಆಗಿರುತ್ತದೆ. ಸೈಬರ್ ಮೂಲಕ ಕಳ್ಳತನವಾದಾಗ ಆತ ಇದ್ದ ಸ್ಥಳ ಬಿಟ್ಟು ರಾಜ್ಯ, ದೇಶವೇ ಬಿಟ್ಟು ಹೊರಗೆ ಇರುವಾಗ ಹಾಗೆ ತೋರಿಸುತ್ತದೆ. ಇಂತಹ ಮೋಸ ಜಾಲ ತಡೆಯಲು ನಾವೂ ಕೂಡ ಸಿದ್ಧರಾಗಿಲ್ಲ. ಇದಕ್ಕೆಲ್ಲಾ ಪರಿಹಾರ ಎಂದರೆ ಮೊದಲೇ ಜಾಗೃತಿ ಇರುವುದು ಮುಖ್ಯ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ರಂಗಸ್ವಾಮಿ, ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ರವಿಕಾಂತ್, ನ್ಯಾಷನಲ್ ಲಾ ಕಾಲೇಜು ಪ್ರಾಧ್ಯಾಪಕ ಡಾ.ನಾಗರತ್ನ, ಸಿಐಟಿ ವಿಷಯ ತಜ್ಞ ವಿನೋದ್ ಕುಮಾರ್ ಇದ್ದರು.