ಮೈಸೂರು: ಸೈಬರ್ ಕ್ರೈಮ್‌ನಿಂದಾಗಿ ಜನರು ಹಣ ಕಳೆದುಕೊಂಡಿರುವ ವಿವಿಧ ಪ್ರಕರಣಗಳು ಪತ್ತೆಯಾಗಿವೆ.
ಗಂಗೋತ್ರಿ ಲೇಔಟ್‌ನ ಯುವ ಇಂಜಿಯರ್‌ಗೆ ಕೆಲ ದಿನಗಳ ಹಿಂದೆ ಕರೆ ಮಾಡಿದ ವ್ಯಕ್ತಿಯೊಬ್ಬ ಡಿಎಚ್‌ಎಲ್ ಎಕ್ಸ್‌ಪ್ರೆಸ್‌ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ನಿಮ್ಮ ಹೆಸರಿನಲ್ಲಿ 200 ಗ್ರಾಂ ಎಂಡಿಎಂಎ ಪಾರ್ಸೆಲ್ ಬುಕ್ ಆಗಿದ್ದು, ನೀವು ದೆಹಲಿ ವಿಭಾಗಕ್ಕೆ ಕರೆ ಮಾಡಿ ದೂರು ನೀಡಿ ಎಂದು ಯಾರಿಗೋ ಕಾನ್ಫರೆನ್ಸ್ ಹಾಕಿದ್ದಾನೆ.
ಆಗ ಮತ್ತೊಬ್ಬ ವ್ಯಕ್ತಿ ಮಾತನಾಡಿ, ನಿಮ್ಮ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಆ ಅಕೌಂಟ್‌ಗಳು ಮನಿ ಲ್ಯಾಂಡರಿಂಗ್ ಕೇಸ್‌ಗೆ ಸಂಬಂಧಿಸಿದ್ದು, ನಿಮ್ಮನ್ನು ಕೂಡಲೇ ಬಂಧನ ಮಾಡಬೇಕಾಗಿದೆ.
ನಿಮ್ಮನ್ನು ಈ ಕೇಸ್‌ನಿಂದ ಬಿಡಬೇಕಾದರೆ ನೀವು ಈ ಖಾತೆ ಬಳಸುತ್ತಿಲ್ಲ ಎಂದು ಆರ್‌ಬಿಐ ಪರಿಶೀಲನಾ ಪತ್ರ ಕೊಡಬೇಕು. ನಿಮ್ಮ ಖಾತೆಯಲ್ಲಿನ ಹಣದ ಸುರಕ್ಷತೆಗಾಗಿ ಡಿಪಾರ್ಟ್‌ಮೆಂಟ್ ಅಕೌಂಟ್‌ಗೆ ವರ್ಗಾವಣೆ ಮಾಡಬೇಕು.
ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಾ. ಕೂಡಲೇ ನಾನು ಹೇಳಿದಂತೆ ಮಾಡಿ ಎಂದು ಹೇಳಿದ್ದಾರೆ. ಅದರಂತೆ ವಿವಿಧ ಹಂತಗಳಲ್ಲಿ 7.82 ಲಕ್ಷ ರೂ. ಪಡೆದು ಮೋಸ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ನಗರದ ಎನ್.ಆರ್.ಮೊಹಲ್ಲಾದ ವೃದ್ಧರೊಬ್ಬರು ಇನ್‌ವೆಸ್ಟ್‌ಮೆಂಟ್ ಕ್ಲಬ್ ಹೆಸರಿನ ವ್ಯಾಟ್ಸ್‌ಆ್ಯಪ್ ಗ್ರೂಪ್ ಸೇರಿ ಬರೋಬ್ಬರಿ 89.62 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಹೆಚ್ಚಿನ ಲಾಭದಾಸೆಗೆ ಈ ಗ್ರೂಪ್‌ನಲ್ಲಿ ಸೂಚಿಸಿದಂತೆ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದಾರೆ. ಆದರೆ ಆರಂಭದಲ್ಲಿ ಒಂದಷ್ಟು ಹಣವನ್ನು ಲಾಭವೆಂದು ನೀಡಿ, ನಂತರ ವಂಚಿಸಲಾಗಿದೆ.
ದತ್ತ ನಗರದ ನಿವಾಸಿಯೊಬ್ಬರ ಬ್ಯಾಂಕ್ ಖಾತೆಯಿಂದ ಅವರ ಗಮನಕ್ಕೆ ಬಾರದಂತೆ 10.50 ಲಕ್ಷ ರೂ. ಅಪರಿಚಿತರಿಗೆ ವರ್ಗಾವಣೆಯಾಗಿದೆ. ಈ ಮೇಲಿನ ಮೂರು ಪ್ರಕರಣಗಳು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.