ಜಿಲ್ಲೆ

ಸೈಬರ್ ಕ್ರೈಂ ಬಗ್ಗೆ ಸಾರ್ವಜನಿಕರಿಗೆ ಅರಿವು ಅತ್ಯಗತ್ಯ: ಎಸ್.ಪಿ.ಹರಿರಾಮ್ ಶಂಕರ್

ಹಾಸನ: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ಇದರ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.

ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಪತ್ರಕರ್ತರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಕರ್ತರಿಗಾಗಿ ಸೈಬರ್ ಕ್ರೈಂ ತಡೆ ಜಾಗೃತಿ ಕಾರ್ಯಕಾರವನ್ನ ಉದ್ಘಾಟಿಸಿ ಮಾತನಾಡಿದ ಅವರು, ಸೈಬರ್ ಕ್ರೈಂ ಪ್ರಕರಣದಲ್ಲಿ ವ್ಯಕ್ತಿಗಳ ಗೌರವಕ್ಕೆ ಧಕ್ಕೆ ತಂದು ಅವರ ಮಾನಹಾನಿಯ ಜೊತೆಗೆ ಹಣಕ್ಕೆ ಬೇಡಿಕೆ ಇಡುವುದು. ಅತ್ಯಮೂಲ್ಯವಾದ ಮಾಹಿತಿಗಳನ್ನ ಕದಿಯುವುದು ಹಾಗೂ ಬ್ಯಾಂಕ್ ಪ್ರಕರಣದಲ್ಲಿ ವಂಚನೆಗಳು ಹೆಚ್ಚಾಗಿ ಕಂಡುಬರುತ್ತವೆ ಎಂದರು.

ಮೊಬೈಲ್‌ನಲ್ಲಿ ಎಲ್ಲಾ ಅಂಶಗಳು ಅಡಗಿರುತ್ತವೆ, ಅದೇ ರೀತಿ ಹೆಚ್ಚು ಅನಾಹುತಗಳು ಕೂಡ ಸಂಭವಿಸುತ್ತವೆ ಇದರ ಬಗ್ಗೆ ಜಾಗೃತಿ ವಹಿಸಬೇಕು. ವಾಟ್ಸಪ್ ಕಾಲ್ ಮಾಡಿ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ.ಸಾಮಾಜಿಕ ಜಾಲತಾಣದಲ್ಲಿ ನೀವು ಹಾಕಿರುವಂತಹ ಫೋಟೋಗಳನ್ನು ಬಳಸಿಕೊಂಡು ಅಶ್ಲೀಲವಾಗಿ ನಿಮಗೆ ಬೆದರಿಕೆ ಹೊರಡುತ್ತಾರೆ. ಇಂತಹ ತಂತ್ರಜ್ಞಾನವನ್ನ ಕದೀಮರು ಬೇರೆ ರಾಜ್ಯದಲ್ಲಿ ಕುಳಿತು ಮಾಡಿ ತಮಗೆ ಬೆದರಿಕೆ ಹಾಕುವಂತಹ ಕೆಲಸಕ್ಕೆ ಕೈ ಹಾಕುತ್ತಾರೆ ಎಂದು ಎಚ್ಚರಿಸಿದರು.

ನಂತರ ಸೈಬರ್ ಕ್ರೈಂ ಪ್ರಕರಣಗಳ ಬಗ್ಗೆ ತರಬೇತಿ ಪಡೆದಿರುವ ಸಿ.ಇ.ಎನ್.ಠಾಣೆಯ ಲ್ಯಾಬ್ ಸಿಬ್ಬಂದಿ ಡಿ.ಆರ್. ಪ್ರತಾಪ್ ಮಾತನಾಡಿ, ಇತ್ತೀಚೆಗೆ ನಡೆಯುತ್ತಿರುವಂತಹ ಸೈಬರ್ ಕ್ರೈಂ ಪ್ರಕರಣಗಳ ಬಗ್ಗೆ ಪತ್ರಕರ್ತರಿಗೆ ತಿಳುವಳಿಕೆ ಮೂಡಿಸಿದರು ಅಲ್ಲದೆ ಯಾವ ಯಾವ ಹಂತದಲ್ಲಿ ಯಾವ ಯಾವ ರೀತಿ ವಂಚನೆಗೆ ಒಳಗಾಗುತ್ತಾರೆ ಎಂಬುದರ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಟ್ಟರು.

ತಮ್ಮ ಮೊಬೈಲ್‌ಗಳಲ್ಲಿ ಚೀನಾ ಆಪ್ ಮತ್ತು ಲೋನ್ ಆಪ್‌ಗಳ ಬಗ್ಗೆ ಎಚ್ಚರ ವಹಿಸಬೇಕು. ಏಕೆಂದರೆ ಅವರು ಸಾಲ ನೀಡುವ ನೆಪದಲ್ಲಿ ತಮ್ಮ ಎಲ್ಲಾ ದಾಖಲಾತಿಗಳು ಮತ್ತು ವಿವರಗಳನ್ನು ಪಡೆದುಕೊಂಡು ತಮಗೆ ವಂಚಿಸುತ್ತಾರೆ.ಮತ್ತು ಯಾವುದೇ ಲಿಂಕ್‌ಗಳು ಬಂದರೂ ಕೂಡ ಅದನ್ನು ಮುಂದುವರಿಸಬಾರದು ಎಂದರು.

ತಂತ್ರಾಂಶವನ್ನು ಬಳಸಿ ತಮ್ಮ ಮೊಬೈಲ್ ಗಳನ್ನು ಹ್ಯಾಕ್ ಮಾಡುವಂತಹ ಪ್ರವೃತ್ತಿ ಹೆಚ್ಚಾಗುತ್ತಿದೆ.ಯಾವುದೇ ಕಾರಣಕ್ಕೂ ತಮ್ಮ ಮೊಬೈಲಿಗೆ ಬಂದಿರುವಂತಹ ಓಟಿಪಿಗಳನ್ನ ಬೇರೆಯವರಿಗೆ ನೀಡಬಾರದು. ಎಲ್ಲರೂ ತಮ್ಮ ಮಾಹಿತಿಗಳನ್ನು ಜೋಪಾನ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಕಿವಿ ಮಾತು ಹೇಳಿದರು.

ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ಸ್ ಜಗದೀಶ್ ಮಾತನಾಡಿ, ತಮಗೆ ಏನಾದರೂ ವಂಚನೆಗೆ ಒಳಗಾಗಿದ್ದರೆ ತಕ್ಷಣವೇ 1930ಗೆ ದೂರವಾಣಿ ಕರೆ ಮಾಡುವ ಮೂಲಕ ದೂರು ದಾಖಲಿಸಬಹುದಾಗಿದೆ. ಬೇರೆಯವರಿಗೆ ಆಸೆ ಆಮಿಷಗಳಿಗೆ ಒಳಗಾಗಿ ಯಾರೂ ಕೂಡ ಹಣ ಹಾಕುವುದು ಮತ್ತು ಇನ್ನಿತರ ಮಾಹಿತಿಗಳನ್ನ ವಿನಿಮಯ ಮಾಡಿಕೊಳ್ಳಬಾರದು ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಪತ್ರಕರ್ತರ ಸಂಘದ ಮಹಾ ಪ್ರದಾನ ಕಾರ್ಯದರ್ಶಿ ಎಚ್.ಬಿ. ಮದನ್‌ಗೌಡ ಮಾತನಾಡಿ,ಪತ್ರಕರ್ತರು ಎಂದರೆ ಎಲ್ಲವನ್ನು ತಿಳಿದುಕೊಂಡವರು ಎಂಬುದನ್ನು ಮರೆತು ಪ್ರತಿದಿನವೂ ಕೂಡ ಕಲಿಯುವುದು ಹೆಚ್ಚಿರುತ್ತದೆ.ಅದೇ ರೀತಿ ಸೈಬರ್ ಕ್ರೈಂ ಅಪರಾಧ ಪ್ರಕರಣಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಿಸುವ ದೃಷ್ಟಿಯಿಂದ ಇಂತಹ ಕಾರ್ಯಗಾರವನ್ನ ಹಮ್ಮಿಕೊಂಡಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ಪತ್ರಕರ್ತರಿಗೆ ಸಮಾಜದ ಬಗ್ಗೆ ಹರಿವಿರಬೇಕು ಮತ್ತು ಅವರು ಮೈ ಮರೆತು ಸುದ್ದಿ ಪ್ರಕಟಿಸಿದರೆ ಸಣ್ಣ ತಪ್ಪುಗಳು ಕೂಡ ದೊಡ್ಡದಾಗಿ ಸಮಾಜಕ್ಕೆ ಮಾರಕವಾಗುವಂತಹ ಪರಿಸ್ಥಿತಿ ಬರಬಹುದು ಆದ್ದರಿಂದ ಎಚ್ಚರಿಕೆಯಿಂದ ಕೆಲಸ ಮಾಡುವಂತಹ ಅಗತ್ಯತೆ ಇದೆ ಎಂದು ಹೇಳಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಳ್ಳುಗೋಪಾಲ್ ಮಾತನಾಡಿ, ಪತ್ರಕರ್ತರಿಗಾಗಿ ಪೊಲೀಸ್ ಇಲಾಖೆ ಅರ್ಥಪೂರ್ಣ ಕಾರ್ಯಕಾರವನ್ನ ಹಮ್ಮಿಕೊಂಡಿದೆ. ಇದು ಎಲ್ಲ ಪತ್ರಕರ್ತರಿಗೂ ಕೂಡ ಸಾಕಷ್ಟು ಪ್ರಯೋಜನವಾಗಿದೆ.ಇದರಿಂದ ಸಾಕಷ್ಟು ಸೈಬರ್ ಕ್ರೈಂ ಪ್ರಕರಣಗಳನ್ನು ತಡೆಯಲು ನೆರವಾಗಲಿದೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಮಂಜು ಬನವಾಸೆ ಸೇರಿದಂತೆ ಜಿಲ್ಲೆಯ ಹಿರಿಯ ಪತ್ರಕರ್ತರು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.