ಬೆಳಗಾವಿ: ಪ್ರಸ್ತುತ ದಿನಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇವುಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಜಿಲ್ಲಾ ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ಜಗದೀಶ ಪೂಜೇರಿ ಹೇಳಿದರು.
ಮಹಾ ಒಕ್ಕೂಟ ಹಾಗೂ ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯದಿಂದ ಬುಧವಾರ ಗಣೇಶಪುರದ ಸಿದ್ಧಿವಿನಾಯಕ ಮಂದಿರದಲ್ಲಿ ಆಯೋಜಿಸಿದ್ದ ಸೈಬರ್ ಅಪರಾಧಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಂಚನೆಗೆ ಸಾಮಾಜಿಕ ಜಾಲತಾಣಗಳನ್ನೇ ಸುಲಭವಾದ ದಾರಿಯನ್ನಾಗಿಸಿಕೊಂಡಿರುವ ವಂಚಕರು ಲಕ್ಷಾಂತರ ರೂ. ದೋಚುತ್ತಿದ್ದಾರೆ. ಇಂತಹ ಅಪರಾಧಗಳ ತಡೆಗಾಗಿ ಮಾಜಿ ಸೈನಿಕರಿಂದ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಎಲ್ಲ ಮಾಜಿ ಸೈನಿಕರು, ಸಾರ್ವಜನಿಕರು ಈ ಸೈಬರ್ ಅಪರಾಧಗಳ ಬಗ್ಗೆ ಜಾಗೃತರಾಗಿ ಮೋಸ ಹೋಗದಂತೆ ಕಾಪಾಡಿಕೊಳ್ಳಬೇಕು ಎಂದರು.
ಸಹಾಯಕ ಪೊಲೀಸ್ ಆಯುಕ್ತ ರಘು ಜೆ. ಮಾತನಾಡಿ, ಸಾರ್ವಜನಿಕರು ಸೈಬರ್ ವಂಚಕರಿಂದ ಯಾವ ರೀತಿ ಸುರಕ್ಷಿತವಾಗಿರಬೇಕೆಂಬುವುದನ್ನು ವಿವರಿಸಿದರು. ನಿಂಗಪ್ಪ ಮಾದರ, ಮಾರುತಿ ಎಲ್.ಕೆ. ಇದ್ದರು. ಮಹಾಒಕ್ಕೂಟದ ಪದಾಧಿಕಾರಿಗಳು, ಮಹಿಳಾ ಸಂಘದ ಪದಾಧಿಕಾರಿಗಳು, ಪೊಲೀಸ್ ಸಿಬ್ಬಂದಿ ಇದ್ದರು.