ಚಾಮರಾಜನಗರ: ಪ್ರಸ್ತುತ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬೆಳೆದಂತೆ ಅಪರಾಧಗಳ ಸ್ವರೂಪ ಕೂಡ ಬದಲಾಗುತ್ತಿದ್ದು, ಸೈಬರ್ ಅಪರಾಧ ಕುರಿತು ಜಾಗೃತಿ ಅಗತ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಸಲಹೆ ನೀಡಿದರು.
ನಗರದ ಜೆಎಸ್‌ಎಸ್ ಕಾಲೇಜು ಸಭಾಂಗಣದಲ್ಲಿ ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧದ ಮೇಲಿನ ಇತ್ತೀಚಿನ ಮಾರ್ಗ ಎಂಬ ವಿಷಯ ಕುರಿತು ಶನಿವಾರ ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನ ಉಪಯುಕ್ತತೆಯ ಜತೆಗೆ ಅದರಿಂದ ಉಂಟಾಗುವ ಕೆಡುಕುಗಳನ್ನು ಅರಿತುಕೊಳ್ಳಬೇಕು. ಸೈಬರ್ ಅಪರಾಧದ ಬಗ್ಗೆ ಮಾಹಿತಿ ಇದ್ದಲ್ಲಿ, ಅದರಿಂದ ಉಂಟಾಗುವ ತೊಂದರೆಯಿಂದ ಪಾರಾಗಬಹುದು. ಇಂತಹ ಕಾರ್ಯಗಾರದಿಂದ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನವಿದೆ. ವಿದ್ಯಾರ್ಥಿಗಳು ಸೈಬರ್ ಅಪರಾಧದ ಬಗ್ಗೆ ತಿಳಿದುಕೊಂಡು, ಮನೆಯ ಇನ್ನಿತರ ಸದಸ್ಯರಿಗೆ ಮಾಹಿತಿಯನ್ನು ನೀಡಬೇಕು. ಆಗಮಾತ್ರ ಸೈಬರ್ ಅಪರಾಧ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬಹುದಾಗಿದೆ ಎಂದು ಹೇಳಿದರು.
ಬಹಳ ಜಾಗೃತರಾಗಿ ಸೈಬರ್ ಅಪರಾಧದಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವುದು ನಿಮ್ಮ ಮೇಲೆ ಇದೆ. ಹಾಗಾಗಿ ಸೈಬರ್ ಅಪರಾಧ ಕುರಿತು ಸಂಪೂರ್ಣ ಮಾಹಿತಿ ನೀಡುವ ಸಲುವಾಗಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ರೀತಿಯ ಕಾರ್ಯಕ್ರಮದಿಂದ ಸೈಬರ್ ಅಪರಾಧ ಕುರಿತು ಹೆಚ್ಚಿನ ಅರಿವು ಆಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರಿನ ಜೆಎಸ್‌ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಸುರೇಶ್, ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ, ಪ್ರಾಧ್ಯಾಪಕ ಡಾ.ಕೆ.ಎಮ್.ರಾಜೇಶ್, ಆರ್.ಮಲ್ಲೇಶ್ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.