ಜಿಲ್ಲೆ

ಸೈನಿಕರ ಸ್ಮರಣೆಗಾಗಿ ರಕ್ತದಾನ ಶ್ರೇಷ್ಠ ಕಾರ್ಯ

ಕುಂದಗೋಳ: ಕರೊನಾದಂಥ ಸಂಕಷ್ಟ ಸಮಯದಲ್ಲಿ ಸೈನಿಕರ ಸ್ಮರಣೆಗಾಗಿ ರಕ್ತದಾನ ಮಾಡಿ ಜೀವ ಉಳಿಸುವಂತಹ ಶ್ರೇಷ್ಠ ಕೆಲಸದಲ್ಲಿ ತೊಡಗಿರುವ ನಿರಾಮಯ ಫೌಂಡೇಷನ್ ಕಾರ್ಯ ಶ್ಲಾಘನೀಯ ಮತ್ತು ಪ್ರೇರಣಾದಾಯಕ ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದರು.

ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಪಟ್ಟಣದ ಕಲ್ಯಾಣಪುರ ಬಸವಣ್ಣಜ್ಜನವರ ಕಲ್ಯಾಣ ಮಂಟಪದಲ್ಲಿ ನಿರಾಮಯ ಫೌಂಡೇಷನ್ ವತಿಯಿಂದ ಶನಿವಾರ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಆನ್​ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವಣ್ಣಜ್ಜನವರು ಮಾತನಾಡಿ, ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಿರಾಮಯ ಫೌಂಡೇಷನ್​ದಿಂದ ರಾಜ್ಯಾದ್ಯಂತ 16 ಸ್ಥಳಗಳಲ್ಲಿ ಏಕಕಾಲದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 527 ಯೋಧರ ಸ್ಮರಣೆಗಾಗಿ 531 ಜನ ರಕ್ತದಾನ ಮಾಡುವ ಮೂಲಕ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ. ಈ ಶಿಬಿರ ಸಂಘಟಿಸಿದ ಫೌಂಡೇಷನ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಹಾಗೂ ಸಂಗಡಿಗರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 71 ಜನ ರಕ್ತದಾನ ಮಾಡಿದರು. ರವಿ ಕಮಡೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಹನುಮಂತಗೌಡ ಪಾಟೀಲ, ಬಸಲಿಂಗಪ್ಪ ಕೋರಿ, ಶ್ಯಾಮ ದೇಸಾಯಿ, ಕುಮಾರ ಸೊರಟೂರ, ಹರೀಶ ಕೊನೇರಿ, ರಾಘವೇಂದ್ರ ಕಾಕಡೆ, ರಾಘು ನಾಯ್ಕರ, ಇತರರಿದ್ದರು. ಬಸವರಾಜ ಸಿ.ಎಂ. ಸ್ವಾಗತಿಸಿದರು. ಗುರು ಭದ್ರಾಪುರ ವಂದಿಸಿದರು. ನಾಗರಾಜ ಸುಬರಗಟ್ಟಿ ನಿರೂಪಿಸಿದರು.