ಜಿಲ್ಲೆ

ಸೈಟ್ ಅಕ್ರಮಕ್ಕೆ ಮಹಾನಗರ ಪಾಲಿಕೆ ಕೊಕ್ಕೆ

ಬೆಳಗಾವಿ: ನಗರದಲ್ಲಿ ಅನಧಿಕೃಕ ಕಟ್ಟಡಗಳ ಮಾಲೀಕರು ಕೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡಿಸಿಕೊಳ್ಳುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯ ಎಲ್ಲ ಆಸ್ತಿಗಳ ದಾಖಲೆಗಳ ಪರಿಶೀಲನೆಗೆ ಮುಂದಾಗಿದೆ.

ಮಹಾನಗರ ಪಾಲಿಕೆಯ ವಿವಿಧ ಬಡಾವಣೆಗಳಲ್ಲಿ ಅನಧಿಕೃತ ಕಟ್ಟಡಗಳ ಮಾಲೀಕರು ಖಾತಾ ಹೆಸರು ನೋಂದಣಿಗೆ ಖೊಟ್ಟಿ ದಾಖಲೆ ಸೃಷ್ಟಿಸಿ ಉಪ ನೋಂದಣಿ ಕಚೇರಿಯಲ್ಲಿ ಅಕ್ರಮವಾಗಿ ನೋಂದಣಿ ಮಾಡಿಸುತ್ತಿರುವ ಪ್ರಕರಣ ಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಅನಧಿಕೃತ ಕಟ್ಟಡಗಳನ್ನು ಪತ್ತೆ ಹಚ್ಚಲು ಮತ್ತು ಅಕ್ರಮ ನೋಂದಣಿ ತಡೆಗಟ್ಟಲು ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿಗಳ ದಾಖಲೆ ಪರಿಶೀಲನೆಗೆ ಪಾಲಿಕೆ ನಿರ್ಧರಿಸಿದೆ.

ಸದ್ಯ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಿವಿಧ ಬಡಾವಣೆಯ ಜನವಸತಿ ಪ್ರದೇಶ, ವಾಣಿಜ್ಯ ಕಟ್ಟಡಗಳು ಸೇರಿ ಒಟ್ಟು 1.40 ಲಕ್ಷ ಆಸ್ತಿಗಳಿವೆ. ಅದರಲ್ಲಿ ಯಾವವು ಅಧಿಕೃತ ಮತ್ತು ಅನಧಿಕೃತ ಕಟ್ಟಡಗಳು ಎಂಬುದು ಗೊತ್ತಿಲ್ಲ. ಸಮರ್ಥ ನಗರ, ಮಹಾತ್ಮ ಫುಲೆ ರಸ್ತೆ ಪ್ರದೇಶ ಸೇರಿ ವಿವಿಧ ಕಡೆ 17 ಕಟ್ಟಡಗಳ ಮಾಲೀಕರು ಖೊಟ್ಟಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಕಟ್ಟಡಗಳ ಮಾಲೀಕರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಇದೇ ರೀತಿ ಬೇರೆ ಬೇರೆ ಬಡಾವಣೆಗಳಲ್ಲಿ ಅಕ್ರಮ ಎಸಗಿರುವ ಕುರಿತು ಮೇಲ್ನೋಟಕ್ಕೆ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಆಸ್ತಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಲು ಕ್ರಮ ವಹಿಸಲಾಗಿದೆ.

1998 ರಿಂದ 2022ರ ಅವಧಿಯಲ್ಲಿ ಬುಡಾ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ವಿವಿಧ ಬಡಾವಣೆಗಳಲ್ಲಿ ಕೆಲ ನಿವೇಶನಗಳು ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಆಗಿಲ್ಲ.

100 ರೂ. ಬಾಂಡ್ ಪೇಪರ್‌ನಲ್ಲಿಯೇ ನಿವೇಶನ ಖರೀದಿಯಾಗಿವೆ. ಇದೀಗ ಅಂತಹ ಕಟ್ಟಡಗಳ ಮಾಲೀಕರು ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಅಧಿಕೃತ ಕಟ್ಟಡಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಅವುಗಳನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಅಕ್ರಮದಿಂದ ಮಹಾನಗರ ಪಾಲಿಕೆಗೆ ಪ್ರತಿ ವರ್ಷ ಹೊಸದಾಗಿ 8 ರಿಂದ 10 ಸಾವಿರ ಆಸ್ತಿಗಳು ಅಧಿಕೃತವಾಗಿ ಸೇರ್ಪಡೆಯಾಗುತ್ತಿವೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ತಿಗಳ ಮರು ಮೌಲ್ಯಮಾಪನ ಇಲ್ಲ

ಮಹಾನಗರ ಪಾಲಿಕೆಯ ವ್ಯಾಪ್ತಿಯ 1.40 ಲಕ್ಷ ಆಸ್ತಿಗಳ ಪೈಕಿ ಬಹುತೇಕ ಆಸ್ತಿಗಳ ಮರು ಮೌಲ್ಯಮಾಪನ ಇಲ್ಲ. ಕಟ್ಟಡ ಪರವಾನಗಿಯು ಒಂದು ಮಹಡಿಗೆ ಮಾತ್ರ ಇರುತ್ತದೆ. ಆದರೆ, ವಾಸ್ತವದಲ್ಲಿ 2 ರಿಂದ 3 ಮಹಡಿಗಳಿವೆ. ಪಾಲಿಕೆಗೆ ಒಂದು ಮಹಡಿಯ ತೆರಿಗೆ ಮಾತ್ರ ಪಾವತಿಸಲಾಗುತ್ತಿದೆ. ಅಲ್ಲದೆ, ಪಾಲಿಕೆಯ ಬಹುತೇಕ ಆಸ್ತಿಗಳ ಗುತ್ತಿಗೆ ಅವಧಿ ಮುಗಿದಿದೆ. ಬಾಡಿಗೆ ದರ ಬದಲಾಗಿಲ್ಲ. ವರ್ಷಗಳಿಂದ ಆಸ್ತಿಗಳ ಮರು ಮೌಲ್ಯಮಾಪನ ಮಾಡಿ ವ್ಯತ್ಯಾಸದ ತೆರಿಗೆ ಹಣವನ್ನು ವಸೂಲಿ ಮಾಡುವ ಕೆಲಸ ಅರ್ಧದಲ್ಲಿಯೇ ಮೊಟಕುಗೊಂಡಿದೆ. ಪರಿಣಾಮ ವಾರ್ಷಿಕವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬಾರದೆ ಪಾಲಿಕೆ ಆರ್ಥಿಕ ಸಂಕಷ್ಟಕ್ಕೀಡಾಗಲು ಮೂಲ ಕಾರಣ ಎನ್ನಲಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಆಸ್ತಿಗಳ ದಾಖಲೆ ಪರಿಶೀಲನೆಗೆ ಕ್ರಮ ವಹಿಸಲಾಗಿದೆ. ಕೆಲವೆಡೆ ಪರಿಶೀಲನೆ ಕಾರ್ಯ ಆರಂಭಗೊಂಡಿದೆ. ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡಿಕೊಂಡಿರುವ ಮಾಲೀಕರ ವಿರುದ್ಧ ಕೇಸ್ ದಾಖಲಿಸಲಾಗಿದೆ.| ಡಾ.ರುದ್ರೇಶ ಘಾಳಿ ಪಾಲಿಕೆ ಆಯುಕ್ತ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ